ಹುಬ್ಬಳ್ಳಿ, ಅ 24(SM): ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಬಾಗಿಲು ಬಂದ್ ಮಾಡುವುದಾ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.
ಬಿಜೆಪಿ ಪಕ್ಷದ ಬಾಗಿಲು ಮುಚ್ಚುವ ಮೊದಲು ದೇವೇಗೌಡರು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಬಿಜೆಪಿಯ ಬಾಗಿಲಿನ ಕೀ ಯಾರ ಬಳಿ ಇದೆ? ಬಾಗಿಲು ಯಾರ ಹತ್ತಿರ ಇದೆ ಎಂಬುದನ್ನು ದೇವೇಗೌಡರು ತಿಳಿದುಕೊಳ್ಳಲಿ ಎಂದು ಅವರು ಲೇವಡಿ ಮಾಡಿದ್ದಾರೆ.
ಬಾಗಿಲು ಮುಚ್ಚಲು ದೇವೇಗೌಡರ ಬಳಿ ಬಾಗಿಲೇ ಇಲ್ಲ ಎಂದು ವ್ಯಂಗ್ಯವಾಡಿದರು. ನಾವು ಅನಿವಾರ್ಯತೆಯಿಂದ ಒಟ್ಟಾಗಿ ಇದ್ದೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ನವರಿಬ್ಬರೂ ಹೇಳುತ್ತಾರೆ. ಅಂದರೆ ಅವರು ರಾಜ್ಯದ ಜನತೆಯ ಒಳಿತಿಗಾಗಿ ಮೈತ್ರಿ ಮಾಡಿಕೊಂಡಿಲ್ಲ ಎಂಬುವುದು ಅವರ ಮಾತಿನಿಂದಲೇ ಸ್ಪಷ್ಟವಾಗುತ್ತದೆ. ಬದಲಿಗೆ ಸೇಡಿನ ರಾಜಕಾರಣಕ್ಕಾಗಿ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೋಶಿ ಆರೋಪಿಸಿದರು.
ನಮಗೆ ಈಗ ಕಾಂಗ್ರೆಸ್ ಜತೆ ಕೈಜೋಡಿಸುವುದು ಅನಿವಾರ್ಯವಾಗಿದೆ ಎಂದು ಜೆಡಿಎಸ್ ನವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪರಿಸ್ಥಿತಿ, ದಿಕ್ಕಿಲ್ಲದೇ ದೇವರನ್ನು ತಬ್ಬಿಕೊಂಡ ಹಾಗಿದೆ. ಜೆಡಿಎಸ್ನವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.