ಧರ್ಮಸ್ಥಳ, ಅ 24(SM):ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 2,75,000 ರೂಪಾಯಿಗಳನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ನೇತೃತ್ವದಲ್ಲಿ ಇಂದು ಹಸ್ತಾಂತರಿಸಲಾಯಿತು.
ಸಚಿವ ಯು.ಟಿ.ಖಾದರ್ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ವರ್ಗಾವಣೆ ಮಾಡಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಡಾ. ವೀರೇಂದ್ರ ಹೆಗಡೆಯವರು ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ವಾಭಿಮಾನದ ಜೀವನ ಸಾಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ ಎಂದು ಹೇಳಿದರು. ಭಾರತದ ಅತ್ಯಂತ ಸ್ವಚ್ಛತೆಯ ದೇವಸ್ಥಾನವೆಂದು ಖ್ಯಾತಿ ಪಡೆದಿದೆ. ಆದರ್ಶ ವ್ಯಕ್ತಿಗಳ ಜೀವನಗಾಥೆ ಓದುದರೊಂದಿಗೆ ಹೆಗಡೆಯವರು ಸಾಗಿದ ಹಾದಿ ಬಗ್ಗೆ ಓದಿದಲ್ಲಿ ವ್ಯಕ್ತಿತ್ವ ಬದಲಾವಣೆ ಸಾಧ್ಯವಾಗುತ್ತದೆ. ಮುಂದಿನ ಮಸ್ತಕಾಭಿಷೇಕದ ಸಂದರ್ಭ ಎಲ್ಲರ ಜತೆ ನಾನೂ ಕಾರ್ಯಕರ್ತನಂತೆ ಭಾಗಿಯಾಗಲಿದ್ದೇನೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ರೇವಣ್ಣ, ಫೆಬ್ರುವರಿಯಲ್ಲಿ ನಡೆಯೋ ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿಗಳಿಂದ ಪೂರ್ಣ ಸಿದ್ಧತೆ ನಡೆಯಲಿದೆ. ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲೇ 23 ಕೋಟಿ ರೂಪಾಯಿಗಳನ್ನು ವಿವಿಧ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ. ಬಿ.ಸಿ.ರೋಡ್ ನಿಂದ ಧರ್ಮಸ್ಥಳಕ್ಕೆ ಬರುವ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 100 ಕೋಟಿ ರೂ. ಬಿಡುಗಡೆಯಾಗಿದೆ. ಮಹಾಮಸ್ತಕಾಭಿಷೇಕದ ಸಂದರ್ಭ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಧರ್ಮಸ್ಥಳದ ಪ್ರತಿಯೊಂದು ಅಭಿವೃದ್ಧಿ ಪೂರಕ ಕೆಲಸಕ್ಕೆ ಸರಕಾರ ಬದ್ಧವಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಇನ್ನು ಇದೇ ಸಂದರ್ಭ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀರಾಮನ ಎತ್ತರಕ್ಕೆ ಏರಿದ್ದಾರೆ. ಧರ್ಮಸ್ಥಳದಲ್ಲಿ ರಾಮ ರಾಜ್ಯವಿದೆ. ಸರಕಾರಕ್ಕೆ ಮಾರ್ಗದರ್ಶನ ನೀಡುವ ಆಡಳಿತವೆಂದರೆ ಧರ್ಮಸ್ಥಳದ ಆಡಳಿತವಾಗಿದೆ. ಜಿಲ್ಲೆಯ ಹಲವು ದೇವಸ್ಥಾನಗಳು ಜೀರ್ಣೋದ್ಧಾರವಾಗಿದ್ದರೆ ಅದಕ್ಕೆ ಧರ್ಮಸ್ಥಳ ಕಾರಣ. ಮಾದಕಪ್ರಿಯರ ಬದುಕನ್ನು ಬದಲಾಯಿಸಿ ಅವರ ಜೀವನದಲ್ಲಿ ಮೋದಕ ತರುವ ಕೆಲಸ ಧರ್ಮಸ್ಥಳದಿಂದ ಆಗಿದೆ. ವೀರೇಂದ್ರ ಹೆಗ್ಗಡೆಯವರದ್ದು ರಾಮಾದರ್ಶವಾದ ಆಡಳಿತ ಎಂದರು.