ಕಾಸರಗೋಡು, ಅ 24(SM): ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಅನುಷ್ಠಾನದ ವಿರುದ್ಧ ಶಬರಿಮಲೆಯಲ್ಲಿ ಪ್ರತಿಭಟನೆ ನಡೆಸಿ ಹಿಂಸಾತ್ಮಕ ಘಟನೆಗೆ ಕಾರಣರಾದವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ 210 ಮಂದಿಯ ದೃಶ್ಯಗಳನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.
ಗುಂಪು ಸೇರಿ ಹಲ್ಲೆ, ಸಾರ್ವಜನಿಕ ಸೊತ್ತು ಹಾನಿ ಸೇರಿದಂತೆ ಜಾಮೀನು ರಹಿತ ಮೊಕದ್ದಮೆಗಳನ್ನು ಇವರ ವಿರುದ್ಧ ಹೂಡಲಾಗಿದೆ. ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಹಾನಿ, ಪೊಲೀಸರ ವಾಹನಗಳ ಧ್ವಂಸ, ಮಹಿಳಾ ಪತ್ರಕರ್ತರ ಮೇಲೆ ಹಲ್ಲೆ ಮೊದಲಾದ ಮೊಕದ್ದಮೆಗಳನ್ನು ಹೂಡಲಾಗಿದೆ. ಸುಮಾರು ೨೦ ರಷ್ಟು ಪ್ರಕರಣಗಳನ್ನು ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ.
ನೀಲಕ್ಕಲ್ ನಿಂದ ಪಂಪಾ ತನಕ ಅಲ್ಲದೆ ಸನ್ನಿದಾನದಲ್ಲೂ ಮಹಿಳೆಯರನ್ನು ತಡೆದವರ ವಿರುದ್ದವೂ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮೂರು ಸಾವಿರದಷ್ಟು ಮಂದಿ ಹಿಂಸಾತ್ಮಕ ಘಟನೆಗೆ ಕಾರಣರಾಗಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಈಗ ಸಂಗ್ರಹಿಸಿರುವ ಚಿತ್ರಗಳನ್ನು ಆಯಾ ಜಿಲ್ಲಾ ಪೊಲೀಸರಿಗೆ ರವಾನಿಸಲಾಗಿದೆ ಎಂದು ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.