ಸುಬ್ರಹ್ಮಣ್ಯ, ಅ 25 (MSP): ಕುಕ್ಕೆ ಕ್ಷೇತ್ರ ಹಾಗೂ ಸಂಪುಟ ನರಸಿಂಹ ಮಠದ ನಡುವೆ ಇರುವ ಅಸಮಧಾನ ದಿನೇ ದಿನೇ ಹೆಚ್ಚಾಗುತ್ತಿದ್ದು, ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಎರಡು ಗುಂಪುಗಳ ಮಧ್ಯೆ ಇತ್ತೀಚೆಗೆ ವೈಮನಸ್ಸು ಏರ್ಪಟ್ಟಿದೆ.
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರ ತಂಡ ಮತ್ತು ಗುರುಪ್ರಸಾದ್ ಪಂಜ ಗುಂಪಿನ ನಡುವೆ ಸುಬ್ರಹ್ಮಮಣ್ಯದಲ್ಲಿ ಬುಧವಾರ ರಾತ್ರಿ ನಡೆದ ವಾಗ್ವಾದ ನಡೆದಿದೆ. ಕೊನೆಗೆ ಇವರ ಮಾತಿನ ಚಕಮಕಿ ಬೀದಿಯಲ್ಲಿ ನಿಂತು ಹೊಡೆದಾಡುವವರೆಗೂ ತಲುಪಿದೆ. ಘಟನೆಯಲ್ಲಿ ಗುರುಪ್ರಸಾದ್ ಅವರು ಗಾಯಗೊಂಡಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಗುರುಪ್ರಸಾದ್ ರನ್ನು ಅಲ್ಲಿದ್ದವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಚೈತ್ರಾ ಕುಂದಾಪುರ ಹಾಗೂ ಇತರ 8 ಜನರನ್ನು ಸುಬ್ರಹ್ಮಣ್ಯ ಪೋಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಗಾಯಗೊಂಡ ಚೈತ್ರರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಎರಡೂ ಗುಂಪುಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು. ಇನ್ನು ಅ.25 ರ ಗುರುವಾರ ಕುಕ್ಕೆ ಸುಬ್ರಹ್ಮಣ್ಯ ಬಂದ್ಗೆ ಕರೆ ನೀಡಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿ ವರ್ತಕರು ಮತ್ತು ಸ್ಥಳೀಯರು ಬಂದ್ಗೆ ಕರೆ ನೀಡಿದ್ದಾರೆ.