ಉಪ್ಪಿನಂಗಡಿ,ಅ 25 (MSP): ಬೆಂಗಳೂರು- ಮಂಗಳೂರು ನಡುವಣ ಸಂಪರ್ಕ ಬೆಸೆಯುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಸರಕು ಸಾಗಾಟದ ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ದ.ಕ ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಎಚ್.ಡಿ ರೇವಣ್ಣ ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಜಿಲ್ಲೆಗೆ ಆಗಮಿಸಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ಜತೆಗೆ ಬುಧವಾರ ಧರ್ಮಸ್ಥಳದಲ್ಲಿ ಮಾತುಕತೆ ನಡೆಸಲಾಗಿದೆ, ಅವರು ಬೆಂಗಳೂರಿಗೆ ಹಿಂದಿರುಗಿದ ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಕಟೀಲ್ ತಿಳಿಸಿದ್ದಾರೆ. ಇದೇ ವಿಚಾರವಾಗಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಅವರೊಂದಿಗೂ ನಾನು ಈಗಾಗಲೇ ಮಾತುಕತೆ ನಡೆಸಿದ್ದು, ಲಾರಿ ಚಾಲಕರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದೇನೆ. ಅವರು ಪೂರಕವಾಗಿ ಸ್ಪಂದಿಸಿದ್ದು, ಗುರುವಾರ ಲಾರಿ ಚಾಲಕರ ನಿಯೋಗ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲಿದ್ದು, ಒಟ್ಟಿನಲ್ಲಿ ಆದಷ್ಟು ಬೇಗ ಲಾರಿಗಳ ಸಂಚಾರಕ್ಕೆ ಅವಕಾಶ ದೊರಕಲಿದೆ’ ಎಂದು ತಿಳಿಸಿದ್ದಾರೆ.
ಶಿರಾಡಿ ಘಾಟಿ ರಸ್ತೆಯಲ್ಲಿ ಲಾರಿಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡದ ಕಾರಣ 10 ತಿಂಗಳಿನಿಂದ ಲಾರಿ ಚಾಲಕ, ಮಾಲೀಕರು ಸಮಸ್ಯೆಗೆ ಸಿಲುಕಿರುವ ಬಗ್ಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಲಾರಿ ಚಾಲಕರ ನಿಯೋಗ ಮಂಗಳವಾರ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.