ಗದಗ,ಅ 25 (MSP): ತನ್ನ ಸಾವಿನ ಹಿಂದಿನ ದಿನ, ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ಸಾವಿನ ಬಗ್ಗೆಯೇ ಮಾತನಾಡಿ ಪ್ರವಚನ ನೀಡಿದ್ದು, ಅವರಿಗೆ ತನ್ನ ಸಾವಿನ ಮುನ್ಸೂಚನೆ ಇತ್ತೇ ಎನ್ನುವ ಸಂಶಯ ಅವರ ಅನುಯಾಯಿಗಳನ್ನು ಕಾಡಲಾರಂಭಿಸಿದೆ. ಪ್ರಚನದ ವೇಳೆ ಸಾವು ಯಾರನ್ನೂ ಬಿಟ್ಟಿಲ್ಲ. ಸಾವಿಗೆ ಸದಾ ತಯಾರಾಗಿ ಇರಬೇಕು ಎನ್ನುವ ಮಾತುಗಳನ್ನಾಡಿದ್ದರು.
ತೋಂಟದಾರ್ಯ ಸಂಸ್ಥಾನಮಠದ 19ನೇ ಪೀಠಾಧಿಪತಿಗಳಾಗಿದ್ದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ(71) ಅವರು ವಿಜಯದಶಮಿಯ ಮಾರನೇ ದಿನ ಅ.22 ಶನಿವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಮುಂಜಾನೆಯೇ ಎಳುತ್ತಿದ್ದ ಸ್ವಾಮೀಜಿ ಅಂದು ಬೆಳಿಗ್ಗೆ 9 ಗಂಟೆಯಾದರೂ ಮಲಗಿದ್ದ ಕಾರಣ ಸಂಶಯಗೊಂಡ ಮಠದ ಸಿಬ್ಬಂದಿಗಳು ಪರಿಶೀಲಿಸಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿದರು.
ಅವರ ಸಾವಿನ ಹಿಂದಿನ ದಿನ ಅಂದರೆ ಅ.19ರಂದು ಸಂಜೆ, ಮಠದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಪ್ರವಚನ ನೀಡುವ ವೇಳೆ ಸಾವಿನ ಬಗ್ಗೆ ಸಂದೇಶ ನೀಡಿದ್ದರು. ಇದೀಗ ಅವರ ಕೊನೆಯ ಸಂದೇಶ ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದ್ದು, ಅವರ ಸಂದೇಶವನ್ನು ಮತ್ತೆ ಮತ್ತೆ ಕೇಳಿಸಿಕೊಂಡು ಭಕ್ತರು ಕಣ್ಣೀರು ಸುರಿಸುತ್ತಿದ್ದಾರೆ. ಪ್ರವಚನದ ಸಂದರ್ಭ " ಸಾವಿನಿಂದ ಯಾರಿಗೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಮಹಾನ್ ಸಾಧಕ ವಿಶ್ವೇಶ್ವರಯ್ಯನವರು 101 ವರ್ಷ ಬದುಕಿದ್ದರು. ಹೊಸಳ್ಳಿ ಬೂದೀಶ್ವರ ಶ್ರೀಗಳು, ಅಂಕಲಿ ಶ್ರೀಗಳು ಹಲವಾರು ವರ್ಷಗಳು ಬದುಕಿದ್ದರು. ಆದರೆ, ಅಂತಿಮವಾಗಿ ಸಾವು ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. . ಸಾವನ್ನು ನಾವು ಎದುರಿಸಬೇಕು. ಅದಕ್ಕೆ ಸದಾ ತಯಾರಾಗಿ ಇರಬೇಕು . ಎಂದು ತಿಳಿಸಿದ್ದರು.