Karavali
ಕರಾಯ: ’ಸಾಲ ಮನ್ನಾದ ಭಿಕ್ಷೆ ಬೇಕಿಲ್ಲ’ ಎನ್ನುತ್ತಿರುವ ಹೈನುಗಾರಿಕೆ ನಿರತ ’ಸ್ವಾಭಿಮಾನಿ ಮಾದರಿ ರೈತ ಕುಟುಂಬ ’
- Thu, Oct 25 2018 12:03:19 PM
-
ವರದಿ: ಅರುಣ್ ಉಪ್ಪಿನಂಗಡಿ
ಉಪ್ಪಿನಂಗಡಿ,ಅ 25 (MSP): ಕೃಷಿಯಿಂದ ಕೈಸುಟ್ಟುಕೊಂಡು ರೈತರು ಆತ್ಮಹತ್ಯೆ ದಾರಿ ಹಿಡಿದಿರುವ ಇಂದಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮಲೆಬೆಟ್ಟುವಿನ ವಿಲಿಯಂ ಲೋಬೋ ಅವರ ಕುಟುಂಬವು ಹೈನುಗಾರಿಕೆಯಿಂದ ಸಂತೃಪ್ತಿಯ ಬದುಕು ಕಂಡು ಕೊಂಡಿದೆ.
ದಿ. ಸಿಪ್ರಿಯಲ್ ಲೋಬೋ ಅವರ ಪುತ್ರ ವಿಲಿಯಂ ಲೋಬೋ ಅಟೋ ಚಾಲಕರಾಗಿ ದುಡಿಯುತ್ತಿದ್ದವರು. ಆದರೆ ನಿರೀಕ್ಷಿತ ಆದಾಯ ಅದರಲ್ಲಿ ಬಾರದಿದ್ದಾಗ ಹೈನುಗಾರಿಕೆಯತ್ತ ಒಲವು ತೋರಿದ ಅವರು ಶೇ.18ರ ಬಡ್ಡಿದರದಲ್ಲಿ ಮೂರು ಲಕ್ಷ ರೂಪಾಯಿ ಸಾಲ ಪಡೆದು ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ ಆರಂಭಿಸಿದರು. ಇದೀಗ ಇವರಲ್ಲಿ 22 ಎಚ್ಎಫ್ ತಳಿಯ ದನಗಳಿದ್ದು, ದಿನವೊಂದಕ್ಕೆ ಏಳು ಲೀಟರ್ನಿಂದ ಆರಂಭವಾದ ಇವರ ಹೈನೋದ್ಯಮ ಇದೀಗ ದಿನವೊಂದಕ್ಕೆ ಸರಾಸರಿ 300 ಲೀಟರ್ ಹಾಲು ಉತ್ಪಾದಿಸುವಷ್ಟರ ಮಟ್ಟಿಗೆ ತಲುಪಿದೆ. ಇಲ್ಲಿ ಉತ್ಪಾದನೆಯಾಗುವ ಹಾಲನ್ನು ತಣ್ಣೀರುಪಂಥ ಹಾಲು ಉತ್ಪಾದಕರ ಸಂಘದ ಮೂಲಕ ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದವರು ಇಲ್ಲಿಗೆ ಬಂದು ಪಡೆದುಕೊಂಡು ಹೋಗುತ್ತಿದ್ದು, ಈ ವರ್ಷ ಇವರು ಒಕ್ಕೂಟಕ್ಕೆ ನೀಡಿದ ಪ್ರತಿ ಲೀಟರ್ ಹಾಲಿಗೆ 1.82 ಪೈಸೆಯಂತೆ ಒಟ್ಟು 1.37 ಲಕ್ಷ ರೂಪಾಯಿ ಬೋನಸ್ ಇವರಿಗೆ ಲಭಿಸಿದೆ.ಬೆಂಗಳೂರಿನಲ್ಲಿ ಉದ್ಯೋಗ ಹೊಂದಿದ್ದ ವಿಲಿಯಂ ಅವರ ತಮ್ಮ ರೋನಾಲ್ಡ್ ಲೋಬೋ ಅವರು ಕೂಡಾ ತನ್ನ ಉದ್ಯೋಗ ಬಿಟ್ಟು ಮನೆಗೆ ವಾಪಸ್ ಆಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇವರ ಇಡೀ ಕುಟುಂಬ ಹೈನುಗಾರಿಕೆಯಲ್ಲೇ ತೊಡಗಿಸಿಕೊಂಡಿದೆ. ಹೈನುಗಾರಿಕೆಯ ಎಲ್ಲಾ ಕೆಲಸ ಕಾರ್ಯಗಳನ್ನು ಇವರ ಕುಟುಂಬದವರು ಎಲ್ಲರೂ ಸೇರಿ ಮಾಡುವುದರಿಂದ ಇವರಿಗೆ ಕಾರ್ಮಿಕರ ಕೊರತೆ ಎದುರಾಗಿಲ್ಲ. ಇನ್ನೊಂದೆಡೆ ಕಾರ್ಮಿಕರಿಗೆ ನೀಡಬೇಕಾದ ಹಣವೂ ಉಳಿತಾಯವಾಗಿದೆ.
ಮೂರು ಎಕರೆ ಜಮೀನಿನಲ್ಲಿ ಮೇವು: ಹೈನುಗಾರಿಕೆಗಾಗಿ ಇವರು ತಮ್ಮ ಮೂರು ಎಕರೆ ಜಮೀನಿನಲ್ಲಿ ‘ಸಿಒ೩’ ಹಾಗೂ ‘ಸಂಪೂರ್ಣ’ ತಳಿಯ ಹಸಿರು ಮೇವು ಬೆಳೆಸಿದ್ದು, ಇದನ್ನು ಕಟಾವು ಮಾಡಿ ಬಳಿಕ ಯಂತ್ರದಲ್ಲಿ ಇದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ದನಗಳಿಗೆ ನೀಡುತ್ತಿದ್ದಾರೆ. ಇದರೊಂದಿಗೆ ಪೌಷ್ಟಿಕ ಆಹಾರವನ್ನು ನೀಡುತ್ತಿದ್ದಾರೆ. ಒಮ್ಮೆ ಕಟಾವು ಮಾಡಿದ ಮೇವು ೬೦-೭೦ ದಿನಗಳಲ್ಲಿ ಮತ್ತೆ ಕಟಾವಿಗೆ ಬರುತ್ತಿದ್ದು, ಇದರಿಂದ ಇವರಿಗೆ ಹಸಿರು ಮೇವಿನ ಕೊರತೆಯಾಗುವುದೇ ಇಲ್ಲ.
ಪ್ರತಿ ದನಗಳ ಖರೀದಿಯಲ್ಲೂ ಇವರು ಸಾಕಷ್ಟು ನಿಗಾ ವಹಿಸುತ್ತಿದ್ದು, ಶುದ್ಧ ಎಚ್ಎಫ್ ತಳಿಯ ಹಸುಗಳನ್ನು ಮೈಸೂರಿನಿಂದ ತಂದಿದ್ದಾರೆ. ಒಂದೊಂದು ದನಕ್ಕೂ 1.35 ಲಕ್ಷ ರೂ. ಕೊಟ್ಟಿದ್ದಾರೆ. ಪ್ರತಿ ದನಗಳು ಸರಾಸರಿ 20 ಲೀ.ಗೂ ಅಧಿಕ ಹಾಲು ನೀಡುತ್ತವೆ. ಮನೆಯ ದನಗಳು ಹಾಕಿದ ಕರುಗಳಲ್ಲಿ ವರ್ಷಕ್ಕೆ ಎರಡು ಹೆಣ್ಣು ಕರುಗಳನ್ನು ಸಾಕುವ ಇವರು ಉಳಿದ ಹೆಣ್ಣು ಕರುಗಳನ್ನು ಸಾಕುವವರಿಗೆ ಉಚಿತವಾಗಿ ನೀಡುತ್ತಾರೆ. ಗಂಡು ಕರುಗಳಾದರೆ ಉಚಿತ ಕರುವಿನೊಂದಿಗೆ ಸ್ವಲ್ಪ ಹಣವನ್ನೂ ನೀಡಿ ಇತರರಿಗೆ ಸಾಕಲು ಕೊಡುತ್ತಾರೆ.
ಹಟ್ಟಿಗೆ ರಬ್ಬರ್ ಮ್ಯಾಟ್ ಹಾಕಿದ್ದು, ಹಟ್ಟಿ ಮತ್ತು ಸುತ್ತಲಿನ ಪರಿಸರದ ಸ್ವಚ್ಛತೆಗೆ ಇವರು ಮೊದಲ ಆದ್ಯತೆ ನೀಡುತ್ತೇವೆ. ದಿನಕ್ಕೆ ನಾಲ್ಕು ಬಾರಿ ದನಗಳನ್ನು ಹಾಗೂ ಹಟ್ಟಿಯನ್ನು ತೊಳೆಯುತ್ತಿದ್ದು, ಹಟ್ಟಿಯಲ್ಲಿ ಸಗಣಿ ಬಿದ್ದ ಕೂಡಲೇ ಅದನ್ನು ಅಲ್ಲಿಂದ ತೆಗೆಯಲಾಗುತ್ತದೆ. ಪ್ರತಿ ದಿನವೂ ನಿಗದಿತ ಸಮಯಕ್ಕೆ ಆಹಾರ ಕೊಟ್ಟಾಗ ದನಗಳು ನಿಗದಿತ ಸಮಯದಲ್ಲೇ ಸಗಣಿ, ಮೂತ್ರ ಮಾಡುತ್ತವೆ. ಹಟ್ಟಿ ಹಾಗೂ ಸುತ್ತಲಿನ ಪರಿಸರ ಸ್ವಚ್ಛವಿದ್ದಾಗ ಮಾತ್ರ ದನಗಳಲ್ಲಿ ರೋಗ ಬಾಧೆ ಕಾಣಿಸುವುದಿಲ್ಲ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ ಹೈನುಗಾರಿಕೆ ಯಶಸ್ಸಾಗಲು ಸಾಧ್ಯ ಎನ್ನುತ್ತಾರೆ ವಿಲಿಯಂ ಅವರು.
ಸಗಣಿಯನ್ನು ದೊಡ್ಡ ಹೊಂಡದಲ್ಲಿ ಶೇಖರಿಸಿಡುವ ಇವರು ತನ್ನ ಕೃಷಿಗೆ, ಗೋಬರ್ ಗ್ಯಾಸ್ಗೆ ಹಾಕಿ ಉಳಿದ ಸೆಗಣಿಯನ್ನು ಮಾರಾಟ ಮಾಡುವ ಮೂಲಕ ಅದರಿಂದಲೂ ಆದಾಯ ಗಳಿಸುತ್ತಾರೆ. ಇನ್ನು ಹಟ್ಟಿ ತೊಳೆದ ನೀರು ಸೇರಿದಂತೆ ದನದ ಮೂತ್ರ ಹೀಗೆ ಎಲ್ಲವೂ ಒಂದೇ ಕಡೆ ಬಂದು ಬೀಳಲು ಮತ್ತೊಂದು ದೊಡ್ಡ ಹೊಂಡ ರಚಿಸಿದ್ದಾರೆ. ಅಲ್ಲಿ ಶೇಖರಣೆಯಾಗುವ ಸಗಣಿ ಸ್ಲರಿಯನ್ನು ತನ್ನ ಅಡಿಕೆ ಕೃಷಿಗೆ, ಮೇವಿನ ಹುಲ್ಲಿಗೆ ಸಿಂಪಡಿಸುತ್ತಾರೆ.ಇಲ್ಲಿ ಒಂದು ಹಟ್ಟಿ ಹಂಚಿನ ಮೇಲ್ಚಾವಣಿಯದ್ದಾಗಿದ್ದರೆ, ಇನ್ನುಳಿದ ಹಟ್ಟಿಗಳು ಸಿಮೆಂಟ್ ಶೀಟಿನವು. ಬೇಸಿಗೆಯಲ್ಲಿ ಸಿಮೆಂಟ್ ಶೀಟಿನ ಹಟ್ಟಿಯಲ್ಲಿ ತಾಪಮಾನ ಅಧಿಕವಾಗಿರುವುದರಿಂದ ಅದನ್ನು ಕಡಿಮೆ ಮಾಡಲು ಸಿಮೆಂಟ್ ಶೀಟಿನ ಮೇಲೆ ಸ್ಪಿಂಕ್ಲರ್ ಅಳವಡಿಸಿ, ನಿರಂತರ ನೀರು ಹಾಯಿಸಲಾಗುತ್ತದೆ. ಇನ್ನೊಂದೆಡೆ ಹಟ್ಟಿಯಲ್ಲಿ ಸಾಕಷ್ಟು ಫ್ಯಾನ್ಗಳು ದಿನದ 24 ಗಂಟೆಯೂ ತಿರುಗುತ್ತಿರುತ್ತದೆ. ಇವರಿಂದ ಇವರ ಹಟ್ಟಿ ಪ್ರವೇಶಿಸಿದ ತಕ್ಷಣ ಎಸಿ ರೂಂ ಪ್ರವೇಶಿಸಿದ ಅನುಭವವಾಗುತ್ತದೆ. ಸಿಮೆಂಟ್ ಶೀಟಿನ ಮೇಲೆ ಬಿದ್ದ ನೀರು ಕೂಡಾ ಇಲ್ಲಿ ಪೋಲಾಗುವುದಿಲ್ಲ. ಇದು ಕೂಡಾ ಹಟ್ಟಿಯ ಒಳಗಡೆ ಇಳಿದು ಸಗಣಿ ಸ್ಲರಿಯ ಗುಂಡಿ ಸೇರುವ ವ್ಯವಸ್ಥೆ ಕಲ್ಪಿಸಲಾಗಿದೆ.
ಎಲ್ಲವೂ ಯಾಂತ್ರಿಕೃತ: ಹಾಲು ಕರೆಯಲು, ಹುಲ್ಲು ತುಂಡರಿಸಲು ಸೇರಿದಂತೆ ಹೆಚ್ಚಿನ ಕೆಲಸಗಳಿಗೆ ಇಲ್ಲಿ ಯಾಂತಿಕೃತ ಸೌಲಭ್ಯಗಳನ್ನು ಅಳವಡಿಸಲಾಗಿದೆ. ದನ, ಹಟ್ಟಿಗಳನ್ನು ಇಲ್ಲಿ ಯಂತ್ರದ ಮೂಲಕ ಅಧಿಕ ಒತ್ತಡದಿಂದ ನೀರನ್ನು ಹಾಯಿಸುವ ಮೂಲಕ ತೊಳೆಯಲಾಗುತ್ತದೆ. ದನಗಳ ಆರೋಗ್ಯದ ದೃಷ್ಟಿಯಿಂದ ಮಾನವ ಕೈಗಳು ದನಗಳನ್ನು ಹೆಚ್ಚು ಸ್ಪರ್ಶಿಸದಂತೆ ಇಲ್ಲಿ ನೋಡಿಕೊಳ್ಳಲಾಗುತ್ತದೆ.
ಮುಂಜಾನೆ 4 ಗಂಟೆಯಿಂದ ಕೆಲಸ ಆರಂಭವಾದರೆ ಬೆಳಗ್ಗೆ 6 ರವರೆಗೆ ಹಟ್ಟಿಯಲ್ಲಿ ಕೆಲಸವಿರುತ್ತದೆ. ಬಳಿಕ ಹುಲ್ಲು ತರುವುದು, ಹಟ್ಟಿ ತೊಳೆಯುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಕುಟುಂಬ ಸದಸ್ಯರು ಹೊಂದಾಣಿಕೆಯಿಂದ ಮಾಡುವ ಮೂಲಕ ಹೈನುಗಾರಿಕೆಯ ಯಶಸ್ವಿಗೆ ಕಾರಣರಾಗಿದ್ದಾರೆ. ವಿಲಿಯಂ ಅವರ ಕುಟುಂಬಕ್ಕೆ 1800 ಅಡಿಕೆ ಗಿಡ, ರಬ್ಬರ್ ಗಿಡಗಳಿದ್ದರೂ, ಇವರು ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿರುವುದು ಮಾತ್ರ ಹೈನುಗಾರಿಕೆಗೆ. ಈ ಬಗ್ಗೆ ಮಾತನಾಡಿದ ವಿಲಿಯಂ ಲೋಬೋ ಅವರು, ಮಾಡುವ ಕೆಲಸದಲ್ಲಿ ಪ್ರೀತಿ, ಪರಿಶ್ರಮವಿದ್ದಾಗ ಯಶಸ್ಸು ನಮ್ಮದಾಗಲು ಸಾಧ್ಯ. ನನಗೆ ಎಲ್ಲಾ ಗೊತ್ತಿದೆ ಎಂಬ ಅಹಂ ನಮ್ಮಲ್ಲಿ ಯಾವತ್ತೂ ಇರಬಾರದು. ಎಲ್ಲರಲ್ಲಿ ಕೇಳಿ ತಿಳಿದುಕೊಳ್ಳುವ ಗುಣ ನಮ್ಮದಾಗಬೇಕು. ಒಂದು ಕಾಲದಲ್ಲಿ 18 ಶೇ. ಬಡ್ಡಿ ದರದಲ್ಲಿ ಆರಂಭಿಸಿದ ಉದ್ಯಮವಿಂದು ನಮ್ಮ ಕುಟುಂಬದ ಕೈ ಹಿಡಿದಿದೆ. ಇಂದು ನಾನು ಕೃಷಿ ಸಾಲವನ್ನೂ ಪಡೆದುಕೊಳ್ಳುತ್ತಿಲ್ಲ. ಸಾಲ ಮನ್ನಾ ಸೌಲಭ್ಯವೂ ಬೇಡ. ಯಾಕೆಂದರೆ ಹೈನುಗಾರಿಕೆಯಲ್ಲಿ ನನಗೆ ಯಾವುದೇ ನಷ್ಟವಾಗಿಲ್ಲ. ತಾನು ಈ ಮಟ್ಟಕ್ಕೆ ಬೆಳೆಯಲು ಹಾಲು ಒಕ್ಕೂಟ, ತಣ್ಣೀರುಪಂಥ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರವಿದೆ. ಇದರೊಂದಿಗೆ ಇನ್ನಿತರರು ನನಗೆ ಹಲವು ರೀತಿಯ ಸಹಕಾರ ನೀಡಿದ್ದಾರೆ. ಹಾಲು ಉತ್ಪಾದನೆಯಲ್ಲಿ ದ.ಕ. ಜಿಲ್ಲೆಯಲ್ಲಿ ನಾನು ಮೂರು ಬಾರಿ ಪ್ರಥಮ ಸ್ಥಾನ ಪಡೆದಿದ್ದೇನೆ. ಹಲವು ಪ್ರಶಸ್ತಿಗಳು ನನ್ನನ್ನು ಅರಸಿಕೊಂಡು ಬಂದಿವೆ. ಹೈನುಗಾರಿಕೆ ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಹೋಗಿ ಆಸಕ್ತರಿಗೆ ತರಬೇತಿ ನೀಡುತ್ತಿದ್ದೇನೆ. ದನಗಳಿಗೆ ಅನಾರೋಗ್ಯಗಳಾದಾಗ ಸೂಕ್ತ ಸಮಯಕ್ಕೆ ಔಷಧಿ ಕೊಡುವುದು, ಅವುಗಳಿಗೆ ನಿಗದಿತ ಸಮಯಕ್ಕೆ ಆಹಾರ ನೀಡಿ ಮೆಲುಕು ಹಾಕಲು ಸಾಕಷ್ಟು ಸಮಯ ನೀಡುವುದು, ಸ್ವಚ್ಛತೆ ಎಲ್ಲವನ್ನು ಕ್ರಮಬದ್ಧವಾಗಿ ಇಲ್ಲಿ ಮಾಡುತ್ತಿದ್ದೇವೆ. ಇದರಿಂದ ಹೈನುಗಾರಿಕೆಯು ನಮಗೆ ನೆಮ್ಮದಿಯ ಜೀವನ ಕೊಟ್ಟಿದೆ ಎನ್ನುತ್ತಾರೆ.
ಬೆಂಗಳೂರಿನ ಉದ್ಯೋಗ ತೊರೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವರ ಸಹೋದರ ರೋನಾಲ್ಡ್ ಲೋಬೋ ಅವರು, ನಾನು ಬೆಂಗಳೂರಿನಲ್ಲಿ ಫ್ಯಾಬ್ರಿಕೇಷನ್ ಕೆಲಸದಲ್ಲಿದೆ. ಆದರೆ ಅಲ್ಲಿನ ಜಂಜಾಟದ ಬದುಕು ಬೇಡವೆನಿಸಿ ಊರಿಗೆ ಬಂದು ಅಣ್ಣನೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡೆ. ಇದರಲ್ಲಿ ನನಗೆ ಸಂಪೂರ್ಣ ನೆಮ್ಮದಿಯಿದೆ. ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತಿನಂತೆ ನಿರಂತರ ಪರಿಶ್ರಮದಿಂದ ಉತ್ತಮ ಫಲ ಪ್ರಾಪ್ತವಾಗಿ ನೆಮ್ಮದಿಯ ಬದುಕು ನಮ್ಮದಾಗಿದೆ ಎನ್ನುತ್ತಾರೆ.