ನವದೆಹಲಿ, ಅ 25 (MSP): ಅಂತರ್ಜಾಲದಲ್ಲಿ ಕಂಡು ಬರುವ ಅಶ್ಲೀಲ ವೆಬ್ ತಾಣಗಳನ್ನು ಮುಚ್ಚಲು ಕೇಂದ್ರ ಸರ್ಕಾರ ನಿಲುವು ತಳೆದಿದ್ದು, ಈ ಹಿನ್ನಲೆಯಲ್ಲಿ ದೇಶಾದ್ಯಂತ ಇಂಟರ್ನೆಟ್ ಸೇವೆ ನೀಡುವ ಸಂಸ್ಥೆಗಳಿಗೆ 827 ಅಶ್ಲೀಲ ದೃಶ್ಯ, ಸಾಹಿತ್ಯ ಪ್ರಕಟಿಸುವ ನೀಲಿಚಿತ್ರಗಳ ವೆಬ್ಸೈಟ್ ಬಂದ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಅಂತರ್ಜಾಲ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳಿಗೂ ತತ್ ಕ್ಷಣದಿಂದ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದ್ದು, ಕೇಂದ್ರವೂ ಉತ್ತರಾಖಂಡ್ ಹೈಕೋರ್ಟ್ ನೀಡಿರುವ ಆದೇಶದ ಅನ್ವಯ ಈ ಕ್ರಮವನ್ನು ಕೈಗೊಂಡಿದ್ದು, ಅಶ್ಲೀಲ 827 ವೆಬ್ ತಾಣಗಳನ್ನು ನಿಷೇಧಕ್ಕಾಗಿ ಸೂಚನೆ ನೀಡಿದೆ.
ಉತ್ತರಾಖಂಡ್ ಹೈಕೋರ್ಟ್ ಇದಕ್ಕೆ ಸಂಬಂಧಿಸಿದ ಆದೇಶವನ್ನು ಸೆಪ್ಟೆಂಬರ್ 27ರಂದು ಜಾರಿಗೊಳಿಸಿದ್ದು, ಆದರೆ ಈ ಆದೇಶದ ಪ್ರತಿಯೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಅಕ್ಟೋಬರ್ 8ರಂದು ದೊರಕಿತ್ತು.
ಈ ಹಿಂದೆಯೇ ಉತ್ತರಾಖಂಡ್ ಹೈಕೋರ್ಟ್ ಜುಲೈ 31, 2015ರಂದು 857 ಪೋರ್ನ್ ವೆಬ್ಸೈಟ್ ನಿಷೇಧಿಸಲು ನೊಟೀಸ್ ಜಾರಿ ಮಾಡಿತ್ತು. ಈ ಕುರಿತಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಟೆಲಿಕಾಂ ಇಲಾಖೆಗೆ ಮಾಹಿತಿ ನೀಡಿತ್ತು.