Karavali
ಕುಂದಾಪುರ: 'ಬಿಎಸ್ ವೈ ಮತ್ತೆ ಸಿಎಂ ಆಗಬಹುದೆಂದು ಶೋಭಾ ಕರಂದ್ಲಾಜೆ ಕನಸು ಕಾಣುತ್ತಿದ್ದಾರೆ' - ಸಿದ್ದರಾಮಯ್ಯ ವ್ಯಂಗ್ಯ
- Thu, Oct 25 2018 03:03:25 PM
-
ಕುಂದಾಪುರ, ಅ 25 (MSP): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯ ಮಂತ್ರಿಯಾಗುವ ಕನಸು ಕನಸಾಗಿಯೇ ಉಳಿಯಲಿದೆ. ಈ ಬಗ್ಗೆ ಶೋಭಾ ಕರಂದ್ಲಾಜೆ ಹಗಲುಗನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಛೇಡಿಸಿದ್ದಾರೆ. ಶೋಭಾ ಕರಂದ್ಲಾಜೆ ಭ್ರಮೆಯಲ್ಲಿದ್ದಾರೆ ಎಂದ ಸಿದ್ಧರಾಮಯ್ಯ, ಶೋಭಾ ಮತ್ತು ಯಡಿಯೂರಪ್ಪ ಸುಳ್ಳನ್ನೇ ಜೀವನ ಮಾಡಿಕೊಂಡಿದ್ದಾರೆ ಎಂದರು.
ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ನಾಗೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯಡಿಯೂರಪ್ಪನ ಮಾತಿಗೆ ಅವರ ಪಕ್ಷದಲ್ಲಿಯೇ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದ ಸಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ವೈಮನಸ್ಸಿಲ್ಲ. ಹಿಂದಿನದನ್ನೆಲ್ಲಾ ಮರೆತು ಮುಂದಿನ ಲೋಕಸಭೆಯ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯುತ್ತದೆ ಎಂದು ಹೇಳಿದರು. ಕೋಮುವಾದಿ ಬಿಜೆಪಿಯನ್ನು ಕರ್ನಾಟಕದಲ್ಲಿ ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿದ ಅವರು, ಈ ಬಾರಿಯ ಉಪಚುನಾವಣೆಯಲ್ಲಿ ಐದೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯಥಿಗಳು ಗೆಲುವ ಸಾಧಿಸಲಿದ್ದಾರೆ ಎಂದರು.
ಜನಪ್ರತಿನಿಧಿಗಳು ಇಷ್ಟ ಬಂದ ಹಾಗೇ ವರ್ತಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಆದರೆ ಅಧಿಕಾರದ ಆಸೆಗೆ ಯಡಿಯೂರಪ್ಪ ರಾಜೀನಾಮೆ ಕೊಟ್ಟ ಪರಿಣಾಮವೇ ಶಿವಮೊಗ್ಗ ಲೋಕಸಭಾ ಚುನಾವಣೆ. ಈ ಚುನಾವಣೆ ಯಾರಿಗೂ ಇಷ್ಟವಿಲ್ಲ ಆದರೆ ಯಡಿಯೂರಪ್ಪ ಮತ್ತು ಅವರ ಮಗನಿಗೆ ಚುನಾವಣೆ ಅನಿವಾರ್ಯವಾಗಿತ್ತು. ಅಧಿಕಾರದ ಆಸೆಗೆ ಈ ಅಪ್ಪ ಮಗ ಏನು ಮಾಡುವುದಕ್ಕೂ ಹೇಸುವುದಿಲ್ಲ ಎಂದರು. ಯಾವ ಪ್ರತಿಧಿಯನ್ನು ಜನರು ಆಯ್ಕೆ ಮಾಡಿದ್ರೋ ಆ ಜನರನ್ನು ಕೇಳಿ ಇವರು ರಾಜೀನಾಮೆ ಕೊಡಬೇಕಾಗಿತ್ತು. ಇಲ್ಲದೇ ಇದ್ದರೆ ನಂಬಿ ಆಯ್ಕೆ ಮಾಡಿದ ಮತದಾರರಿಗೆ ಅವರು ಮಾಡಿದ ಅತೀ ದೊಡ್ಡ ಅವಮಾನವಾಗುತ್ತದೆ ಎಂದರು. ಹಾಗಾಗೀ ಮತ್ತೆ ಮತ್ತೆ ಅವರನ್ನು ಆಯ್ಕೆ ಮಾಡಿದ್ರೆ ಜನ ಮೋಸ ಹೋಗ್ತಾನೇ ಇರ್ತಾರೆ ಎನ್ನುವುದನ್ನು ಮತದಾರರು ಅರ್ಥ ಮಾಡ್ಕೋಬೇಕು ಎಂದರು. ಈ ಬಾರಿ ಎಲ್ಲಾ ಅರಾಜಕತೆಗೆ ಜನ ಉತ್ತರ ಕೊಡ್ತಾರೆ. ಸಮ್ಮಿಶ್ರ ಅಭ್ಯರ್ಥಿ ಮಧು ಬಂಗಾರಪ್ಪ ಈ ಬಾರಿ ಗೆಲ್ಲುತ್ತಾರೆ ಎಂದರು.
ಐದು ವರ್ಷಗಳ ಕಾಲ ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಜನರ ಸೇವೆ ಮಾಡುವ ಪ್ರಾಮಾಣಿಕ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ಪ್ರತಿಯೊಬ್ಬ ಬಡವರಿಗೆ ತಿಂಗಳಿಗೆ ಏಳು ಕೆಜಿ ಅಕ್ಕಿ ಕೊಟ್ಟೆವು. ಬಿಜೆಪಿಯವರು ಕೊಟ್ಟಿದ್ದಾರೆ. ಕರ್ನಾಟಕ ಬಿಡಿ ದೇಶದಲ್ಲಿಯೆ ಕೊಟ್ಟಿಲ್ಲ. ಆದ್ರೆ ನಾವು ಕೊಟ್ಟೆವು. ಆದ್ರೆ ನಾವು ಕಳೆದ ಚುನಾವಣೆಯಲ್ಲಿಯಲ್ಲಿ ಕರಾವಳಿಯಲ್ಲಿ ಕೇವಲ ಮೂರು ಸ್ಥಾನ ಗೆದ್ದೆವು. ಹಾಗಾದರೆ ನಾವು ಏನ್ ತಪ್ಪು ಮಾಡಿದ್ದೇವೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದರು. ಈ ಬಗ್ಗೆ ಮತದಾರರು ಯೋಚನೆ ಮಾಡ್ಬೇಕಾಗಿದೆ ಎಂದರು.
ಬಿಜಪಿ ನಾಯಕರ ಹೇಳಿಕೆಗಳ ವಿರುದ್ಧ ಕಿಡಿ ಕಾರಿದ ಸಿದ್ಧರಾಮಯ್ಯ, ನಾನೇನು ಹಿಂದೂ ಅಲ್ವಾ? ಮಧು, ಜಯಮಾಲ, ಪ್ರಮೊದ್, ಸೊರಕೆ ಎಲ್ಲರೂ ಹಿಂದೂ ಅಲ್ವಾ? ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಮಾತ್ರ ಹಿಂದೂನಾ? ಓಟು ಕೇಳುವಾಗ ಹಿಂದೂ. ಆಮೇಲೆ ಹಿಂದೂಗಳು ಹಿಂದೆ ನಾಯಕರೆಲ್ಲ ಮುಂದೆ. ಹಿಂದುತ್ವದಿಂದ ದೇಶದ ಜನಕ್ಕೆ ಹೊಟ್ಟೆ ತುಂಬಲ್ಲ. ಜನರನ್ನು ಪ್ರಚೋದಿಸಿ ಬಿಜೆಪಿ ದಾರಿ ತಪ್ಪಿಸುತ್ತಿದೆ.
ಬಿಎಸ್ ವೈ ಹಸಿರು ಶಾಲುಹಾಕೊಂಡು ಡೋಂಗಿತನ ಮಾಡುತ್ತಿದ್ದಾರೆ. ಬಿಎಸ್ ವೈ ಹಸಿರು ಶಾಲಿನ ರಾಜಕಾರಣ ಮಾಡ್ತಾರೆ. ಮಿಸ್ಟರ್ ಯಡಿಯೂರಪ್ಪ ನೀವು ಹಾನೆಸ್ಟಾ...? ಬಿಎಸ್ ವೈ ಜೈಲಿಗೆ ಹೋದ ಗಿರಾಕಿ ಎಂದು ಕಿಡಿಕಾರಿದರು. ಪ್ರಧಾನಿ ಮೋದಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಿದ ಸಿದ್ಧು, ಅಚ್ಚೇದಿನ್ ಕಬೀ ನಹೀ ಆಯೇಗ ಎಂದರು. ಮೋದಿಯ ಮುಂದೆ ರಾಜ್ಯ ನಾಯಕರು ಬಾಯಿಯನ್ನೇ ಬಿಡಲ್ಲ. ಈ ಗಿರಾಕಿಗಳಿಗೆ ಮೋದಿ ಮುಂದೆ ಬಾಯಿ ಬರಲ್ಲ. ಸಾಲಮನ್ನಾ ಮಾಡದೇ ಇರೋದಕ್ಕೆ ಮೋದಿಗೆ ಯಾವ ರೋಗ ಬಂದಿದೆ. ಮೋದಿ ಚೌಕಿದಾರ ಅಂತ ಭಾಷಣ ಮಾಡಿದ್ದೇ ಮಾಡಿದ್ದು. ನಾನು ತಿನ್ನಲ್ಲ.. ತಿನ್ನಕ್ಕೆ ಬಿಡಲ್ಲ ಅಂದ್ರಲ್ಲ ಮಿಸ್ಟರ್ ಮೋದಿ? ರಫೆಲ್ ಹಗರಣ ದೇಶದ ಅತೀ ದೊಡ್ಡ ಹಗರಣವಾಯ್ತಲ್ಲ? ಹಾಗಾದ್ರೆ ೪೦ ಸಾವಿರ ಕೋಟಿ ಎಲ್ಲೋಯ್ತು ಮಿಸ್ಟರ್ ಮೋದಿ? ಏನಾಯ್ತಪ್ಪ ನಿಮ್ಮ ಬಣ್ಣ ಬದಲಾಯ್ತಲ್ಲ ಮಿ. ಮೋದಿ ಎಂದು ಛೇಡಿಸಿದರು.ಬಂಗಾರಪ್ಪ ಕಾಂಗ್ರೆಸ್ ನಲ್ಲಿ ಸಿಎಂ ಆಗಿದ್ದರು. ಸಾಮಾಜಿಕ ನ್ಯಾಯ ಮಧು ಬಂಗಾರಪ್ಪಗೆ ರಕ್ತದಲ್ಲೇ ಬಂದಿದೆ. ಮಧು ಗೆದ್ದರೆ ಬಂಗಾರಪ್ಪ ನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ಬಾರಿ ಮತದಾರರು ವಾಸ್ತವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದ ಅವರು ಐದೂ ಕಡೆಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದರು.
ಸಚಿವ ಜಮೀರ್ ಅಹಮ್ಮದ್ ಮಾತನಾಡಿ, ಬಡವರ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಮಧು ಬಂಗಾರಪ್ಪ ತನ್ನ ವೈಯುಕ್ತಿಕ ವರ್ಚಸ್ಸನ್ನೂ ಹೊಂದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ವಿರುದ್ಧ ಅಲೆ ಎದ್ದು ಕಾಣಿಸುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಭದ್ರವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಕರಾವಳಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡುತ್ತಿದ್ದೇನೆ ಎಂದು ಹೇಳಿದರು.
ಮಧು ಬಂಗಾರಪ್ಪ ಮಾತನಾಡಿ, ಬಂಗಾರಪ್ಪನವರ ಗ್ರಾಮೀಣ ಕೃಪಾಂಕದಿಂದ ಸಾಕಷ್ಟು ಕುಟುಂಬಗಳು ಅಭಿವೃದ್ಧಿ ಕಂಡಿವೆ. ಆಶ್ರಯ ಆರಾಧನಾ ಯೋಜನೆಗಳು ಬಡ ಕುಟುಂಬಗಳಿಗೆ ಉಸಿರು ಕೊಟ್ಟಿದೆ. ಇದೆಲ್ಲದರ ಜೊತೆಗೆ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಬಂಗಾರಪ್ಪ ಕೊನೆಯಲ್ಲಿ ಒಂದು ಬಾರಿ ಸೋತರು ಅವರ ಸೋಲಿಗೆ ನ್ಯಾಯ ಒದಗಿಸಲು ಮತದಾರರು ನನ್ನನ್ನು ಆಯ್ಕೆ ಮಾಡುವರೆಂಬ ಭರವಸೆಯಲ್ಲಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕಳೆದ ಒಂಭತ್ತೂವರೆ ವರ್ಷಗಳಲ್ಲಿ ನೀವು ಬೇರೆಯವರಿಗೆ ಅವಕಾಶ ಕೊಟ್ಟಿದ್ದೀರಿ ಮತ್ತು ಅವರನ್ನು ಎಷ್ಟು ಬಾರಿ ಭೇಟಿ ಮಾಡಿದ್ದೀರಿ ಎಂದು ಕೇಳುವುದಿಲ್ಲ. ಆದರೆ ಉಳಿದ ನಾಲ್ಕೂವರೆ ತಿಂಗಳಲ್ಲಿ ಪ್ರಯತ್ನ ಮೀರಿ ನನ್ನ ಜವಾಬ್ಧಾರಿ ನಿರ್ವಹಿಸುತ್ತೇನೆ ಅಭಿವೃದ್ಧಿ ಮಾಡುತ್ತೇನೆ ಎಂದರು.
ಮಾಜಿ ಸಚಿವ ವಿನಯ ಕುಮಾರ ಸೊರಕೆ, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರು ಪ್ರತಾಪ್ ಚಂದ್ರ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಭಾವ, ಗಫೂರ್, ದೇವಿ ಪ್ರಸಾದ್ ಶೆಟ್ಟಿ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ, ಮಹಿಳಾ ಜಿಲ್ಲಾಧ್ಯಕ್ಷೆ ವೆರೋನಿಕ ಕರ್ನೆಲಿಯೋ, ಮೇಲ್ಮನೆ ಸದಸ್ಯ ಜೆಡಿಎಸ್ನ ಭೋಜೇ ಗೌಡ, ಜೆಡಿಎಸ್ ಬೈಂದೂರು ಬ್ಲಾಕ್ ಅಧ್ಯಕ್ಷ ಸಂದೇಶ್ ಭಟ್, ಜೆಡಿಎಸ್ ಮುಖಂಡ ರವಿ ಶೆಟ್ಟಿ, ಬೈಂದೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್ ಉಪಸ್ಥಿತರಿದ್ದರು.
ರಾಜು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಚಂದ್ರ ಶೆಟ್ಟಿ ಸ್ವಾಗತಿಸಿದರು. ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ ಮದ್ವರಾಜ್, ಉಸ್ತುವಾರಿ ಸಚಿವೆ ಜಯಮಾಲಾ, ಬೈಂದೂರು ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಉಪಸ್ಥಿತರಿದ್ದರು.