ಕುಂದಾಪುರ, ಅ 25 (MSP): ಮಿ ಟೂ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ. ಹೆಣ್ಣು ಮುಕ್ತವಾಗಿ ಬಂದಾಗ ಬೆಂಬಲ ನೀಡಬೇಕು. ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡಸನ್ನು ದೂಷಿಸುವುದು ತಪ್ಪು. ಹೆಣ್ಣಿನ ಚಿತ್ರಹಿಂಸೆಗೆ ದೌರ್ಜನ್ಯಕ್ಕೆ ಮಿಟೂ ಬಲ ತಂದುಕೊಟ್ಟಿದೆ ಎಂದವರು ಹೇಳಿದರು.
ಡಾ. ರಾಜ್ ಕುಮಾರ್ ಕಾಲದಲ್ಲಿ ನಾವು ಬೆಳೆದವರು. ನಮ್ಮ ಕಾಲ ಚಿತ್ರರಂಗದ ಸುವರ್ಣಯುಗವಾಗಿತ್ತು. ಇಂತಹ ದಿನಗಳನ್ನೇ ನಾನು ನೋಡಿಲ್ಲ ಎಂದ ಜಯಮಾಲಾ, 46 ವರ್ಷದಲ್ಲಿ 75 ಸಿನೆಮಾ ಮಾಡಿದ್ದೇನೆ ಒಂದೇ ಒಂದು ಕಹಿ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ ಎಂದಿದ್ದಾರೆ.
ಈಗಿನ ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲ. ನಟ ಅರ್ಜುನ್ ಸರ್ಜಾ ಸರಳ ಸಜ್ಜನ ಹುಡುಗ. ಸರ್ಜಾ ತಂದೆಯ ಜೊತೆಯೂ ಅಭಿನಯಿಸಿದ್ದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಸಭೆ ಕರೆದಿದ್ದು, ವಾಣಿಜ್ಯ ಮಂಡಳಿ ಈ ಬಗ್ಗೆ ತೀರ್ಮಾನಕ್ಕೆ ಬರಲಿದೆ. ಯಾವ ಹೆಣ್ಣಿಗೂ ಸಮಸ್ಯೆ ಆಗಬಾರದು ಹಾಗೆಯೇ ಯಾವ ಪುರುಷನಿಗೂ ಅನ್ಯಾಯ ಆಗಬಾರದು. ವಿಶಾಖ ಜಡ್ಜ್ ಮೆಂಟ್ ವಿಂಗ್ ಎಲ್ಲಾ ಕಡೆ ತೆರೆಯಬೇಕು. ಎಲ್ಲಾ ಕಚೇರಿ, ಸಂಸ್ಥೆಯಲ್ಲಿ ವಿಶಾಖ ಶಾಖೆ ತೆರೆಯಬೇಕು ಎಂದರು.
ಮೀಟೂ ಪ್ರಕರಣಗಳಿಂದ ಚಿತ್ರರಂಗ ಇಬ್ಬಾಗವಾಗಲಿದೆಯೇ ಎಂದು ಪತ್ರಕರ್ತರು ಕೆಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಯಮಾಲಾ, ಚಿತ್ರರಂಗವನ್ನು ಮೀಟೂ ಇಬ್ಬಾಗ ಮಾಡಲು ಸಾಧ್ಯವಿಲ್ಲ. ಸ್ಯಾಂಡಲ್ವುಡ್ಗೆ 85 ವರ್ಷಗಳ ಇತಿಹಾಸ ಇದೆ ಎಂದರು.