ವರದಿ: ಅರುಣ್ ಉಪ್ಪಿನಂಗಡಿ
ಉಪ್ಪಿನಂಗಡಿ, ಅ 25 (MSP): ಸತತವಾಗಿ ಮಳೆ ಸುರಿದರೆ ಯಾವ ಬೆಟ್ಟವೂ ಭದ್ರವಲ್ಲ ಎಂಬ ಸತ್ಯ ಈ ಬಾರಿಯ ಮಳೆಗಾಲದಲ್ಲಿ ಗೋಚರಿಸಿದ ಫಲವಾಗಿ ಎತ್ತರೆತ್ತರದಲ್ಲಿ ತಲೆಎತ್ತಿರುವ ಕಟ್ಟಡಗಳು ಅಪಾಯದ ಅಂಚಿಗೆ ಸಿಲುಕಿವೆ. ಲಕ್ಷಾಂತರ ಬೆಲೆ ಬಾಳುವ ಕಟ್ಟಡಗಳು ಧಾರಾಶಾಹಿಯಾಗುವುದನ್ನು ತಪ್ಪಿಸಲು ಕಟ್ಟಡಗಳನ್ನೇ ಸ್ಥಳಾಂತರಿಸುವ ತಂತ್ರಜ್ಞಾನಕ್ಕೆ ಇದೀಗ ಜನ ಮೊರೆ ಹೋಗುತ್ತಿದ್ದು, ಉಪ್ಪಿನಂಗಡಿಯಲ್ಲಿ ಮನೆಯೊಂದನ್ನು ಸ್ಥಳಾಂತರಿಸುವ ಕಾರ್ಯಾ ಚಾಲನೆಯಲ್ಲಿದೆ.
ಉಪ್ಪಿನಂಗಡಿ ಮಠ ಎಂಬಲ್ಲಿ ಭಾವಕುಂಜ್ಞಿ ಎಂಬವರ ಒಡೆತನದ ಒಂದು ಮಹಡಿಯ ಸುಮಾರು 2800 ಚದರ ಅಡಿ ವಿಸ್ತೀರ್ಣದ ಮನೆಯು ಎತ್ತರದ ಗುಡ್ಡ ಪ್ರದೇಶದಲ್ಲಿದೆ. ಮನೆಯ ಕೆಳಭಾಗದಲ್ಲಿನ ಮನೆಗೆ ಹಾನಿಯಾಗಬಾರದೆಂದು ಸುಮಾರು 15 ಲಕ್ಷ ವೆಚ್ಚದಲ್ಲಿ ಭದ್ರವಾದ ತಡೆಗೋಡೆಯನ್ನು ನಿರ್ಮಿಸಿ ಸುರಕ್ಷತೆಯನ್ನು ಮೂಡಿಸಲಾಗಿತ್ತು. ಆದರೆ ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ತಡೆಗೋಡೆಯೇ ಒಂದು ಅಡಿಯಷ್ಟು ವಾಲಿಕೊಂಡು ಮನೆಯೂ ಕೂಡಾ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಕಂಡು ಬಂದಿತ್ತು. ತಡೆಗೋಡೆ ವಾಲಿಕೊಂಡು ಬಿದ್ದರೂ ಕೆಳಭಾಗದ ಮನೆಯೂ ಸಂಪೂರ್ಣ ಹಾನಿಯಾಗುವ ಭೀತಿ ಒಂದೆಡೆಯಾದರೆ ಇನ್ನೊಂದೆಡೆ ಜೀವಮಾನದ ಕನಸು ನನಸಾಗಿಸಿ ಕಟ್ಟಿದ ಮನೆ ಕುಸಿದು ಬಿದ್ದರೆ ಎಲ್ಲವೂ ನಾಶವಾಗುವ ಸಂಕಷ್ಠದ ಸಾಧ್ಯತೆಯ ಅಪಾಯ ಗೋಚರಿಸಿತು.
ಈ ಎಲ್ಲಾ ಅಪಾಯವನ್ನು ತಪ್ಪಿಸುವ ಸಲುವಾಗಿ ಮನೆ ಮಾಲಕ ಭಾವಕುಂಜ್ಞಿರವರು ಮನೆಯ ಸ್ಥಳವನ್ನು ತಗ್ಗಿಸಿ ಸ್ಥಳಾಂತರಗೊಳಿಸುವ ಯೋಜನೆಗೆ ಮುಂದಾದರು. ಅದರಂತೆ ಹರ್ಯಾಣದ ಕಟ್ಟಡ ಸ್ಥಳಾಂತರ ಸ್ಥಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡಅವರು, ಎರಡು ತಿಂಗಳ ಕಾಲಾವಕಾಶದಲ್ಲಿ ಮನೆಯನ್ನು ತಗ್ಗಿಸಿ ಸ್ಥಳಾಂತರಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಂತೆ ಈಗಿನ ಒಂದು ಮಹಡಿಯ ಮನೆಯನ್ನು 7 ಅಡಿಯಷ್ಟು ಸ್ಥಳಾಂತರಗೊಳಿಸಿ 10 ಅಡಿಯಷ್ಟು ತಗ್ಗು ಪ್ರದೇಶದಲ್ಲಿಯಥಾ ಸ್ಥಿತಿಯಲ್ಲಿ ಸ್ಥಾಪಿಸಬೇಕಾಗಿದೆ. ಅದಕ್ಕಾಗಿಕರ್ಗಲ್ಲಿನಅಡಿಪಾಯದ ಈ ಮನೆಯಕಲ್ಲಿನ ಅಡಿಪಾಯವನ್ನು ಸಂಪೂರ್ಣವಾಗಿ ತೆಗೆದು ಪಂಚಾಂಗಕ್ಕೆ ಕಾಂಕ್ರೀಟ್ ಭೀಮ್ ಅಳವಡಿಸಿ ಜಾಕ್ ಮೂಲಕ ಸದ್ಯ ನಿಲ್ಲಿಸಲಾಗಿದೆ.
ಬಳಿಕ 7 ಅಡಿಯಷ್ಟು ದೂರದಲ್ಲಿ 10 ಅಡಿ ಆಳಕ್ಕೆ ಸಮತಟ್ಟು ಸ್ಥಳವನ್ನು ನಿರ್ಮಿಸಿ ಅಲ್ಲಿಗೆ ಈ ಮನೆಯನ್ನು ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಹರ್ಯಾಣದ ಟಿ ಡಿ ಬಿ ಇಂಜಿನಿಯರಿಂಗ್ ಸಂಸ್ಥೆಯು ಈ ಕಾರ್ಯದ ಹೊಣೆ ಹೊತ್ತಿದ್ದು, ಸ್ಥಳಾಂತರ ಕಾರ್ಯಕ್ಕೆ ಸಂಬಂಧಿಸಿ ಒಂದು ಮೀಟರ್ ವ್ಯಾಪ್ತಿಯ ಸ್ಥಳಾಂತರಕ್ಕೆ ಕಟ್ಟಡದ ಪ್ರತಿಚದರ ಅಡಿ ವಿಸ್ತೀರ್ಣದ ನೆಲೆಗಟ್ಟಿನಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಒಟ್ಟಾರೆ ಈ ಬಾರಿಯ ಮಳೆಗಾಲದ ಅವಾಂತರ ಸುಭದ್ರ ಮನೆಗಳನ್ನೂ ಅಭದ್ರತೆಯಲ್ಲಿ ಸಿಲುಕಿಸಿದೆ ಎನ್ನುವುದಕ್ಕೆಇದೇ ಸಾಕ್ಷಿಯಾಗಿದೆ.