ಸುಳ್ಯ, ಅ 25(SM): ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಅವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಚೈತ್ರಾ ಕುಂದಾಪುರ ಸಹಿತ 7 ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 3ರ ತನಕ ನ್ಯಾಯಾಂಗ ಬಂಧನ ವಿಧಿಸಿ ಸುಳ್ಯ ಕೋರ್ಟ್ ಆದೇಶ ನೀಡಿದೆ. ಐಪಿಸಿ ಸೆಕ್ಷನ್ 307 ರಡಿ ಚೈತ್ರಾ ಹಾಗೂ ಹಲ್ಲೆ ನಡೆಸಿದ 8 ಮಂದಿಯನ್ನು ಬಂಧಿಸಲಾಗಿತ್ತು.
ಘಟನೆಯ ವಿವರ:
ಸುಬ್ರಮಣ್ಯದ ಕಾಶೀಕಟ್ಟೆಯ ಬಳಿ ಅಕ್ಟೋಬರ್ 25ರಂದು ಸಂಜೆ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಅವರೊಂದಿಗೆ ಚೈತ್ರಾ ಹಾಗೂ ಬೆಂಬಲಿಗರು ವಾಗ್ವಾದ ನಡೆಸಿ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠದ ನಡುವೆ ಕಳೆದ ಕೆಲವು ತಿಂಗಳಿನಿಂದ ಸರ್ಪಸಂಸ್ಕಾರ ಸೇವೆಯ ವಿಚಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಇತ್ತೀಚೆಗೆ ಸುಬ್ರಮಣ್ಯ ಮಠದ ನೇತೃತ್ವದಲ್ಲಿ ಸುಧರ್ಮ ಸಭೆ ಕೂಡಾ ನಡೆದಿತ್ತು. ಆ ಸಭೆಯಲ್ಲಿ ಭಾಗಿಯಾಗಿದ್ದ ಚೈತ್ರಾ ಕುಂದಾಪುರ ಭಾಷಣ ಮಾಡುವ ಸಂದರ್ಭ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪಸಂಸ್ಕಾರ ಸೇವೆಯ ಕುರಿತು ಕೆಟ್ಟದಾಗಿ ಮಾತನಾಡಿದ್ದರು. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ಕೂಡಾ ದಾಖಲಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚೈತ್ರಾ ಹಾಗೂ ಗುರುಪ್ರಸಾದ್ ನಡುವೆ ವಾಗ್ವಾದ ನಡೆದಿತ್ತು. ಆದರೆ, ಬುಧವಾರ ಸಂಜೆ ಸುಬ್ರಹ್ಮಣ್ಯಕ್ಕೆ ತೆರಳಿದ್ದ ಚೈತ್ರಾ ಮತ್ತು ಬಳಗ ಗುರುಪ್ರಸಾದ್ ಮೇಲೆ ಹಲ್ಲೆ ನಡೆಸಿದ್ದಾರೆ.