ಉಡುಪಿ, ಅ26(SS): ಬಿಜೆಪಿಯವರು ಜನರನ್ನು ಪ್ರಚೋದಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದುತ್ವ ಯಾರೊಬ್ಬರ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಜೋಶ್ನಲ್ಲಿಯೇ ಪ್ರಚಾರ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಮಗನಿಗೆ ವೋಟ್ ಹಾಕಬೇಡಿ. ಬಿ.ಎಸ್.ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿಕೊಂಡು ಮೋಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಬೇಕು ಅಂತಾ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಓಡಾಡಿದರು. ಕೊನೆಗೆ ಎರಡೂವರೆ ದಿನ ಸಿಎಂ ಆದರು ಎಂದು ವ್ಯಂಗ್ಯ ಮಾಡಿದರು.
ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ತಮಗೆ ತಿಳಿದಂತೆ ಮಾಡುವುದು ಸರಿಯಲ್ಲ. ತಾವು ರಾಜೀನಾಮೆ ನೀಡಿದ ಕ್ಷೇತ್ರದಿಂದ ಪುತ್ರನನ್ನು ಕಣಕ್ಕೆ ಇಳಿಸಿದ್ದಾರೆ. ಮೂರು ಉಪಚುನಾವಣೆಗಳು ಅನಗತ್ಯವಾಗಿ ಬಂದಿವೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಎಂ ಆಗುವ ಆಸೆಯಿದೆ. ಆದ್ದರಿಂದಲೇ ಹೀಗೆಲ್ಲಾ ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ರಾಜ್ಯ ನಾಯಕರು ಬಾಯಿಯನ್ನೇ ಬಿಡುವುದಿಲ್ಲ. ಸಾಲಮನ್ನಾ ಮಾಡದಕ್ಕೆ ಮೋದಿ ಅವರಿಗೆ ಯಾವ ರೋಗ ಬಂದಿದೆ ಎಂದು ಪ್ರಶ್ನಿಸಿದ ಅವರು, ಅಚ್ಚೇದಿನ್ ಕಬೀ ನಹೀ ಆಯೇಗಾ. ಹೇ ಮಿಸ್ಟರ್ ಮೋದಿ. ಇಲ್ಲಿ ಕೇಳಪ್ಪಾ ನೀನು. ಚೌಕಿದಾರ ಅಂತ ಭಾಷಣ ಮಾಡಿದ್ದೇ ಮಾಡಿದ್ದು. ತಿನ್ನಲ್ಲ ತಿನ್ನಕ್ಕೆ ಬಿಡಲ್ಲ ಅಂದಿದ್ಯಲ್ಲಪ್ಪಾ. ಈಗ ಏನಾಯಿತು ಎಂದು ಪ್ರಧಾನಿಯ ಕಾಲೆಳೆದಿದ್ದಾರೆ.