ಪುತ್ತೂರು, ಅ 26 (MSP): ದಿ ವಿಲನ್ ಚಿತ್ರಕ್ಕೆ ಸಂಬಂಧಪಟ್ಟಂತೆ ದಾವಣಗೆರೆಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಎಮ್ಮೆ ಕರುವನ್ನು ಬಲಿ ನೀಡಿ ಪ್ರಾಣಿ ಹಿಂಸೆ ಮಾಡಲಾಗಿದೆ ಎಂದು ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ‘ದಿ ವಿಲನ್’ ಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಥಿಯೇಟರ್ ಗೆ ನುಗ್ಗಿ ದಾಂಧಲೆ ನಡೆಸಿ, ಚಿತ್ರ ಮಂದಿರಕ್ಕೆ ಹಾನಿ ಉಂಟು ಮಾಡಿದ ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧನ ಮಾಡಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಪುತ್ತೂರಿನ ಪರ್ಲಡ್ಕ ನಿವಾಸಿ ರಾಕೇಶ್ ಕುಮಾರ್ (40) ಮತ್ತು ಪುತ್ತೂರು ಪಾಂಗಳಾಯಿ ನಿವಾಸಿ ಪ್ರಶಾಂತ್ ಮಣಿಯಾಣಿ (34) ಎಂದು ಗುರುತಿಸಲಾಗಿದೆ. ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿ ಗೋ ಹತ್ಯೆ ಮಾಡಲಾಗಿದೆ ಎಂದು ಚಿತ್ರ ಮಂದಿರಕ್ಕೆ ನುಗ್ಗಿ ಗಲಾಟೆ ನಡೆಸಿ ದಾಂಧಲೆ ಎಬ್ಬಿಸಿ, ಚಿತ್ರಮಂದಿರಕ್ಕೆ ಸೋಡಾ ಬಾಟಲಿ ಎಸೆಯಲಾಗಿದೆ. ಅಲ್ಲದೆ ಚಿತ್ರ ಪ್ರದರ್ಶನ ಪ್ರಚಾರದ ಬ್ಯಾನರ್ ಹರಿದು ಹಾಕಿದ್ದಾರೆ ಎಂದು ಆರೋಪಿಸಿ ಚಿತ್ರಮಂದಿರದ ಮ್ಯಾನೇಜರ್ ನವೀನ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯಿಂದ 5 ಸಾವಿರ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.