ಸುಳ್ಯ, ಅ 26 (MSP): ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಚೈತ್ರಾ ಕುಂದಾಪುರ ಅವರ ನಡುವೆ ನಡೆದ ಮಾರಾಮಾರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ವೀಡಿಯೋ ಚಿತ್ರೀಕರಣದ ಸಂದೇಶ ಕಳುಹಿಸಿರುವ ಚೈತ್ರ ಕುಂದಾಪುರ ಹಲ್ಲೆಗೆ ಕಾರಣಗಳನ್ನು ನೀಡಿದ್ದಾರೆ. ಹಲ್ಲೆಗೊಳಗಾದ ಗುರುಪ್ರಸಾದ್ ಪಂಜ ಹಾಗೂ ಆಶಿತ್ ಕಲ್ಲಾಜೆ ಎನ್ನುವ ವ್ಯಕ್ತಿಗಳು ತಮ್ಮ ಫೇಸ್ಬುಕ್ ಖಾತೆಯಲ್ಲಿ ತನ್ನ ಬಗ್ಗೆ ಅಶ್ಲೀಲ ರೀತಿಯ ಕಮೆಂಟ್ ಗಳನ್ನು ಹಾಕಿದ್ದಾರೆ. ಇವೆಲ್ಲವನ್ನು ಸಹಿಸಿಕೊಂಡಿರುವ ನಾನು ಸುಮ್ಮನಿದ್ದೆ. ಆದರೆ ಅ.24 ರ ಬುಧವಾರದಂದು ಸಂಪುಟ ನರಸಿಂಹ ಮಠಕ್ಕೆ ಬಂದ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಹಾಗೂ ಆತನ ಸಹಚರರು ನಮ್ಮ ಕಾರಿಗೆ ಅಡ್ಡಗಟ್ಟಿದ್ದರು. ಅಲ್ಲದೆ ಗ್ಲಾಸ್ ಗಳನ್ನು ಒಡೆಯಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾರಿನಿಂದ ಇಳಿದು ಬಂದಾಗ ಗುರು ಪ್ರಸಾದ್ ತನ್ನ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಹೀಗಾಗಿ ನನ್ನನ್ನು ನಾನು ರಕ್ಷಣೆ ಮಾಡಲು ಆತನನ್ನು ಹಿಂದಕ್ಕೆ ತಳ್ಳಿರುವುದಾಗಿ ಹೇಳಿದ್ದಾರೆ.
ಇದಲ್ಲದೆ ಗುರು ಪ್ರಸಾದ್ ಒಬ್ಬ ರೌಡಿ ಶೀಟರ್ ಆಗಿದ್ದು ಅಂಥವರ ಬಳಿ ತಾನೇಕೆ ಜಗಳಕ್ಕೆ ಹೋಗಬೇಕು ಎಂದು ಪ್ರಶ್ನಿಸಿದ್ದು, ಆತ ರೌಡಿ ಎಂದು ತಿಳಿದ ಮೇಲೂ ನಾನು ಹಲ್ಲೆ ನಡೆಸಲು ಹೋಗುತ್ತೇನೆಯೇ? ಎಂದು ಪ್ರಶ್ನಿಸಿ ಸ್ಪಷ್ಟನೆ ನೀಡಿದ್ದಾರೆ. ಇದೀಗ ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.