ಮಂಗಳೂರು, ಅ 26(SM): ಮಂಗಳೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ ಇದರ ಸೂಪರಿಂಟೆಂಡಿಂಗ್ ಇಂಜಿನಿಯರಿಂಗ್ ಕಛೇರಿಯಲ್ಲಿ ತಾಂತ್ರಿಕ ಸಹಾಯಕ ಹಾಗೂ ಅಸಿಸ್ಟೆಂಟ್ ಇಂಜಿನಿಯರ್ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ತಾಂತ್ರಿಕ ಸಹಾಯಕ ಸೂರ್ಯನಾರಾಯಣ್ ಭಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಎಸಿಬಿ ಬಲೆಗೆ ಬಿದ್ದವರು.
ಇವರು ಆದಂ ಎಂಬವರಿಂದ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಮಂಗಳೂರು ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಲಂಚ ಪಡೆದ ತಾಂತ್ರಿಕ ಸಹಾಯಕ ಹಾಗೂ ಅಸಿಸ್ಟೆಂಟ್ ಇಂಜಿನಿಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ವಿವರ:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಎಂಬಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಎರಡು ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯ ಟೆಂಡರ್ ಗೆ 52.58 ಲಕ್ಷ ರೂಪಾಯಿಗಳಿಗೆ ಮೂಡಿಗೆರೆ ತಾಲೂಕಿನ ಬಾಪುನಗರದ ಆದಂ ಎಂಬವರು ಬಿಡ್ಡ್ ಮಾಡಿಕೊಂಡಿದ್ದರು. ಆದಂ ಕೂಡ ಬಿ.ಇ ಸಿವಿಲ್ ವ್ಯಾಸಂಗ ಮಾಡಿದ್ದರು. ತಂದೆಯೊಂದಿಗೆ 10 ವರ್ಷಗಳಿಂದ ಕಂಟ್ರಾಕ್ಟರ್ ಕೆಲಸ ಮಾಡಿಕೊಂಡಿದ್ದರು.
ತಾಂತ್ರಿಕ ಬಿಡ್ಡನ್ನು ತೆರೆದಾಗ ಕಾಮಗಾರಿಯು ಆದಂ ತಂದೆಯವರಿಗೆ ಮಂಜೂರಾಗಿರುತ್ತದೆ. ಬಳಿಕ ಸುಮರು 10 ದಿನಗಳ ಹಿಂದೆ ಮಂಗಳೂರಿನ RDPR(ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ) ಟೆಕ್ನಿಕಲ್ ಅಸಿಸ್ಟೆಂಟ್(T.A) ಸೂರ್ಯನಾರಾಯಣ್ ಭಟ್ ಹಾಗೂ ಅದೇ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ (A.E) ಸುಧೀನ್ ಎಂಬವರು ಆದಂಗೆ ಕರೆ ಮಾಡಿ ಕಾಮಗಾರಿಯ ಫೈನಾನ್ಸಿಯಲ್ ಬಿಡ್ ತೆರೆಯಲು ಟೆಂಡರ್ ಮೊತ್ತದ 1 ಶೇಕಡಾ ಹಣವನ್ನು ಅಂದರೆ ಸುಮಾರು 50 ಸಾವಿರ ರೂಪಾಯಿ ಹಣವನ್ನು ಅವರ ಕಛೇರಿಯ ಸೂಪರಿಡೆಂಟ್ ಇಂಜಿನಿಯರ್(S.E) ರವೀಂದ್ರ ಕಿಣಿಯವರು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಆದಂ ಹಣದ ವಿಚಾರವಾಗಿ ಚರ್ಚೆ ಮಾಡಿಕೊಂಡಿದ್ದಾರೆ.
ಬಳಿಕ ಆದಂ ಮಂಗಳೂರು ಎಸಿಬಿ ಕಛೇರಿಗೆ ತೆರಳಿ ಮೂವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದು ಎಸಿಬಿ ಅಧಿಕಾರಿಗಳ ಮಾರ್ಗದರ್ಶನದಂತೆ ಅಕ್ಟೋಬರ್ 26ರ ಶುಕ್ರವಾರದಂದು ಸಂಜೆ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ ಇದರ ಸೂಪರಿಂಟೆಂಡಿಂಗ್ ಇಂಜಿನಿಯರಿಂಗ್ ಕಛೇರಿಯಲ್ಲಿ ತಾಂತ್ರಿಕ ಸಹಾಯಕ ಸೂರ್ಯನಾರಾಯಣ್ ಭಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಇರುವ ಸಂದರ್ಭ 25 ಸಾವಿರ ರೂಪಾಯಿ ಹಣ ನೀಡಲು ತೆರಳಿದ್ದಾರೆ. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಇನ್ನು ತಾಂತ್ರಿಕ ಸಹಾಯಕ ಸೂರ್ಯನಾರಾಯಣ್ ಭಟ್ ಬ್ಯಾಗ್ ನಲ್ಲಿ ಹೆಚ್ಚುವರಿ 26 ಸಾವಿರ ರೂಪಾಯಿ ಪತ್ತೆಯಾಗಿದ್ದು ಅದನ್ನು ಕೂಡ ಎಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಸಿಬಿ ಎಸ್ಪಿ ಶೃತಿ.ಎನ್.ಎಸ್, ಡಿವೈಎಸ್ಪಿ ಸುಧೀರ್.ಎಮ್.ಹೆಗ್ಡೆ, ಉಡುಪಿ ಡಿವೈಎಸ್ಪಿ ದಿನಕರ್ ಶೆಟ್ಟಿ, ಇನ್ಸ್ಪೆಕ್ಟರ್ ಯೊಗೀಶ್ ಕುಮಾರ್.ಬಿ.ಸಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.