ಉಡುಪಿ, ಅ27(SS): ಅಂಬುಲೆನ್ಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಕೋಟ ಮಣೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಉತ್ತರಕನ್ನಡ ಮೂಲದವರು ಎಂದು ಗುರುತಿಸಲಾಗಿದೆ.
ಉತ್ತರಕನ್ನಡ ಮೂಲದ ಉಲ್ಲಾಸ್ ತಳೇಕರ್ ಅವರಿಗೆ ಅನಾರೋಗ್ಯವಿದ್ದ ಕಾರಣ, ಉಲ್ಲಾಸ್ ಜೊತೆ ಕುಟುಂಬಸ್ಥರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಉಡುಪಿಯ ಕೋಟ ಮಣೂರು ಬಳಿ ಲಾರಿ ಮತ್ತು ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇಂದು ಮುಂಜಾನೆ ನಡೆದ ಈ ಅಪಘಾತದಲ್ಲಿ ಸಾಧನಾ ಉಲ್ಲಾಸ್ ತಳೇಕರ್ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಮೂರು ಮೃತದೇಹಗಳನ್ನು ರವಾನೆ ಮಾಡಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾತ್ರವಲ್ಲ, ಘಟನಾ ಸ್ಥಳದಲ್ಲಿ ಕೋಟ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.