ನವದೆಹಲಿ, ಅ27(SS): ಕೋಮು ಗಲಭೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಮೋದಿ ಮೌನವಾಗಿದ್ದಾರೆ. ಈ ಮೂಲಕ ತಮಗೆ ಮತ ಹಾಕಿದ ಜನರ ನಂಬಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಕಳೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಕೋಮು ಗಲಭೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಮಾತ್ರ ಮೌನ ಮುರಿಯುವುದಿಲ್ಲ ಎಂದು ಸಿಂಗ್ ಟೀಕೆ ಮಾಡಿದರು.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಗ್ಗೆಯೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಅಪನಗದೀಕರಣ ಮತ್ತು ಸರಕು - ಸೇವಾ ತೆರಿಗೆಗಳು ಅರ್ಥವ್ಯವಸ್ಥೆಯ ದುರಂತ. ಮೋದಿ ತೆಗೆದುಕೊಂಡಿರುವ ಕೆಲವೊಂದು ನಿಯಮಗಳಿಂದ ದೇಶದಲ್ಲಿ ಅರಾಜಕತೆ ತಲೆದೋರಿದೆ. ಸಿ.ಬಿ.ಐ ಸಂಸ್ಥೆಗಳ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲವನ್ನೂ ಮಾಡಿದ್ದೇನೆ ಎಂದು ಪೋಸ್ ಕೊಡುವುದನ್ನು ಬಿಟ್ಟು ಮೋದಿ ಸರ್ಕಾರ ಯಾವುದನ್ನು ಸಾಧಿಸಿಲ್ಲ. ಮೊದಲು ಜನರ ನಂಬಿಕೆ ಉಳಿಸಿಕೊಳ್ಳಲಿ ಎಂದು ಮನಮೋಹನ್ ಸಿಂಗ್ ಸವಾಲು ಹಾಕಿದ್ದಾರೆ.