ಮೈಸೂರು, ಅ27(SS): ನಾನೇನು ಮೊಸಳೆ ಕಣ್ಣೀರು ಹಾಕಿ ನಾಟಕ ಮಾಡಲ್ಲ. ನನ್ನದು ಮೊಸಳೆ ಕಣ್ಣೀರು ಎಂದು ಹೇಳುವವರಿಗೆ ಮಾನವೀಯತೆಯೇ ಇಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆರೋಗ್ಯದ ಜೊತೆ ಚೆಲ್ಲಾಟವಾಡಬೇಡಿ. ಬಡವರ ಬಗ್ಗೆ ನನ್ನಲ್ಲಿರುವ ಕಾಳಜಿ ಬಗ್ಗೆ ಅನುಮಾನ ಪಡಬೇಡಿ. ನನ್ನ ಆರೋಗ್ಯಕ್ಕಿಂತ ನನ್ನ ಜವಾಬ್ದಾರಿ ನಿರ್ವಹಣೆ ಮುಖ್ಯ. ಸಾಯುವವರೆಗೂ ಮುಖ್ಯಮಂತ್ರಿ ಆಗಿರುತ್ತೇನೆ ಎಂದುಕೊಂಡಿಲ್ಲ. ಜನಸೇವೆಯೇ ನನಗೆ ಮುಖ್ಯ. ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ. ನಾನು ಎಲ್ಲಾ ವಿಚಾರವನ್ನು ಭಾವನಾತ್ಮವಾಗಿ ನೋಡುತ್ತೇನೆ ಎಂದು ಹೇಳಿದ್ದಾರೆ.
ನಾವೇನು ವಿಧಾನಪರಿಷತ್ ಮೂಲಕ ಅಧಿಕಾರ ಪಡೆದಿಲ್ಲ. ಜನರ ಬಳಿ ಹೋಗಿ ಆಯ್ಕೆಯಾಗಿ ಆಡಳಿತ ಮಾಡುತ್ತಿದ್ದೇವೆ. ಜೆಡಿಎಸ್ನಲ್ಲಿ ಮಾತ್ರ ಅಪ್ಪ ಮಕ್ಕಳು ಅಣ್ಣ ತಮ್ಮ ಇರೋದಾ...? ಬಿಜೆಪಿಯಲ್ಲಿ ಇಲ್ಲವಾ...? ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಗ ಬಿಟ್ಟು ಇನ್ಯಾರು ಅಭ್ಯರ್ಥಿ ಇರಲಿಲ್ಲವಾ...? ಎಷ್ಟು ಪಕ್ಷಗಳಲ್ಲಿ ಅಪ್ಪ ಮಕ್ಕಳು, ಅಣ್ಣ ತಮ್ಮ ಇರಲ್ಲ ಎಂದು ಪ್ರಶ್ನಿಸಿದರು.
ವಿಧಾನಸೌಧದ ನನ್ನ ಕಚೇರಿಯಲ್ಲಿ ಪ್ರತಿಭಾವಂತರಿಗೆ ಆದ್ಯತೆ ನೀಡಿ ಕೆಲಸ ಕೊಟ್ಟಿದ್ದೇನೆ. ಯಾರಿಂದಲೂ ಲಂಚ ಸ್ವೀಕರಿಸಿ ಕೆಲಸ ಕೊಟ್ಟಿಲ್ಲ. ಯಾರಿಂದಲಾದರೂ ಹಣ ತೆಗೆದುಕೊಂಡಿದ್ದರೆ ಸಾಬೀತುಪಡಿಸಲಿ ಎಂದು ಹೇಳಿದ್ದಾರೆ.
ಉಪಚುನಾವಣೆಗಾಗಿ ವಿಧಾನಸೌಧಕ್ಕೆ ಬೀಗ ಹಾಕಿಲ್ಲ. ಸರ್ಕಾರದ ಆಡಳಿತ ಎಂದಿನಂತೆ ನಡೆಯುತ್ತಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ 20 ಉಪಚುನಾವಣೆ ಮಾಡಿದ್ದರು. ಆಪರೇಷನ್ ಕಮಲ ಮಾಡಿದ್ದರು. ಆಗ ವಿಧಾನಸೌಧದ ಬಾಗಿಲು ಹಾಕಿದ್ರಾ...? ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.