ಕಣ್ಣೂರು, ಅ27(SS): ಶಬರಿಮಲೆ ಅಯ್ಯಪ್ಪ ಭಕ್ತರೊಂದಿಗೆ ಬಿಜೆಪಿ ಬಂಡೆಯಂತೆ ನಿಂತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ತಾಳಿಕ್ಕಾವುನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಶಬರಿಮಲೆ ಮಹಿಳಾ ಪ್ರವೇಶದ ವಿರುದ್ಧ ಪ್ರತಿಭಟಿಸಿದ್ದ 2000 ಬಿಜೆಪಿ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೇರಳ ರಾಜ್ಯದಲ್ಲಿಂದು ಧಾರ್ಮಿಕ ನಂಬಿಕೆಗಳು ಹಾಗೂ ರಾಜ್ಯ ಸರ್ಕಾರದ ಕ್ರೌರ್ಯಗಳ ನಡುವೆ ಹೋರಾಟ ನಡೆಯುತ್ತಿದೆ. ಬಿಜೆಪಿ, ಆರ್.ಎಸ್.ಎಸ್ ಹಾಗೂ ಇತರೆ ಸಂಘಟನೆಗಳ 2000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸಲಾಗಿದೆ. ಬಿಜೆಪಿ ಅಯ್ಯಪ್ಪ ಭಕ್ತರ ಜೊತೆಗೆ ಬಂಡೆಯಂತೆ ನಿಂತಿದೆ ಎಂದು ಹೇಳಿದ್ದಾರೆ.
ವಿವಿಧ ನಿಯಮ ಹಾಗೂ ಪದ್ಧತಿಗಳೊಂದಿಗೆ ಸಾಕಷ್ಟು ದೇವಾಲಯಗಳು ನಡೆಯುತ್ತಿವೆ. ಸರ್ಕಾರದ ವರ್ತನೆ ಹೀಗೆಯೇ ಮುಂದುವರೆದರೆ, ಎಲ್.ಡಿ.ಎಸ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಹಿಂಜರಿಯುವುದಿಲ್ಲ. ದೇವಾಲಯದ ಪ್ರವೇಶದ ಮೂಲಕ ಲಿಂಗ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. ಕೇರಳ ರಾಜ್ಯದಲ್ಲಿಂದು ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ. ಅಯ್ಯಪ್ಪ ಭಕ್ತರನ್ನು ಭೇದಿಸುವುದು ಬೆಂಕಿಯೊಂದಿಗೆ ಆಟವಾಡಿದಂತೆ ಎಂದು ಎಚ್ಚರಿಸಿದ್ದಾರೆ.