ಪುತ್ತೂರು,ಅ 28 (MSP): ಕಬಕ ಸಮೀಪದ ಪೋಳ್ಯ ಎಂಬಲ್ಲಿ ಅ.15ರಂದು ತಡರಾತ್ರಿ ಮನೆಯೊಂದರ ಸುತ್ತ ಕಚ್ಚಾ ಬಾಂಬ್ ಗಳನ್ನು ಅಳವಡಿಸಿ, ಸ್ಫೋಟಿಸುವ ಮೂಲಕ ಮನೆದ್ವಂಸ ಹಾಗೂ ಮನೆ ಮಂದಿಯ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ನಗರ ಪೊಲೀಸರು ಶನಿವಾರ ಕೇರಳದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ತುಡುವಿಳ ತಾಲ್ಲೂಕಿನ ಅರ್ಕುಳ ಪಂಚಾಯಿತಿ ವ್ಯಾಪ್ತಿಯ ಪಿಣಕಾಟ್ ನಿವಾಸಿ ಬಾಬು ( ಬಾಲು, ಬಾಲೇಟ್ಟ , ದೇವಸ್ಯ ಸೆಬಾಸ್ಟಿಯನ್ ಯಾನೆ ಕುಟ್ಟಚ್ಚನ್ ಯಾನೆ ಮಹಮ್ಮದ್) (81) ಬಂಧಿತ ಆರೋಪಿ. ಕಣ್ಣೂರು ಜಿಲ್ಲೆಯ ಅಲಕ್ಕೋಡು ಪೊಲೀಸ್ ಠಾಣಾ ವ್ಯಾಪ್ತಿಯ ಅಲಕ್ಕೋಡು ಬಸ್ ನಿಲ್ದಾಣದಲ್ಲಿ ಶುಕ್ರವಾರ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಪೋಳ್ಯ ನಾರಾಯಣ ಪ್ರಸಾದ್ ಅವರ ಮನೆಯಲ್ಲಿ ರಾತ್ರಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿತ್ತು. ಮನೆಯ ಮುಂಬಾಗಿಲಿನ ಮುಂದೆ ಕಚ್ಚಾ ಬಾಂಬ್ ಇಟ್ಟು ಸ್ಫೋಟಿಸಿದ ದುಷ್ಕರ್ಮಿ ಓಡಿ ಹೋಗುವುದು ಮನೆಯಲ್ಲಿದ್ದ ದಂಪತಿ ಗಮನಕ್ಕೆ ಬಂದಿತ್ತು. ಈ ವೇಳೆ ಪತ್ನಿ ಶಾಲಿನಿ ಗಂಭೀರ ಗಾಯಗೊಂಡಿದ್ದರು. ಅಲ್ಲದೆ ಘಟನೆಯಿಂದ ಮನೆಯ ಎದುರಿನ ಬಾಗಿಲು, ದಾರಂದ ಮತ್ತು ಪಕ್ಕದ ಕಿಟಿಕಿಗೆ ಹಾನಿಯಾಗಿತ್ತು. ಕಿಟಿಕಿ ಬಾಗಿಲಿನ ಗಾಜು ಸಿಡಿದು ನಾರಾಯಣ ಪ್ರಸಾದ್ ಅವರ ಕೈಗೆ ಸಣ್ಣ ಪ್ರಮಾಣದ ಗಾಯವಾಗಿತ್ತು.
ಕಬಕ ಸಮೀಪ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಬಾಬು ಪೋಳ್ಯ ಮಸೀದಿಯ ಒಂದು ರೂಂನಲ್ಲಿ ವಾಸ್ತವ್ಯ ಹೊಂದಿದ್ದ.20 ದಿನವಾದರೂ ಸಂಬಂಧಪಟ್ಟ ದಾಕಲೆ ನೀಡದೆ ಇರುವುದರಿಂದ ಹಾಗೂ ಆತನ ವರ್ತನೆ ಸರಿ ಇಲ್ಲದೇ ಇರುವುದರಿಂದ ಅಲ್ಲಿಂದ ಹೊರಹಾಕಿದ್ದರು. ಬಳಿಕ ನಾರಾಯಣ ಪ್ರಸಾದ್ ಅವರ ಮನೆಯಲ್ಲೇ ವಾಸ್ತವ್ಯವಿದ್ದು ಅವರ ಕ್ಯಾಟರಿಂಗ್ ಕೆಲ್ಸಕ್ಕೂ ಬಾಬು ಕೈಜೋಡಿಸುತ್ತಿದ್ದ . ಈ ಮದ್ಯೆ ನಾರಾಯಣ್ ಪ್ರಸಾದವರ ಮನೆಗೆ 3 ಬಾಂಬ್ ಗಳನ್ನು ಇಟ್ಟು ಸ್ಪೋಟಕ್ಕೆ ಸಂಚು ರೂಪಿಸಿದ್ದ, ಇದರಲ್ಲಿ ಮನೆ ಹೆಬ್ಬಾಗಿಲಿನ ಬಳಿಯ ಒಂದು ಬಾಂಬ್ ಸ್ಪೋಟಗೊಂಡಿತ್ತು.
ಬಾಬು ೭೦ ಸಾವಿರ ರೂಪಾಯಿಯನ್ನು ನಾರಯಣ ಪ್ರಸಾದ್ ಅವರಿಗೆ ನೀಡಿದ್ದು, ಅದರಲ್ಲಿ 20 ಸಾವಿರ ರೂ ವನ್ನು ಮಾತ್ರ ಹಿಂತಿರುಗಿಸಿದ್ದರು. ಉಳಿದ ೫೦ ಸಾವಿರ ಕೊಡದೆ ಧಮ್ಕಿ ಹಾಕಿದ್ದರು. ಇದೇ ದ್ವೇಷದಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಈತನಿಗೆ ಸ್ಪೋಟಕ ನೀಡಿದ ಇನ್ನೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರು ಬಾಬು ಯಾನೆ ಬಾಲು ಎಂಬಾತನ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿದ್ದರು. ಈ ತಂಡಗಳು ಪುತ್ತೂರು,ಸುಳ್ಯ, ಕುಶಾಲನಗರ,ಹುಣಸೂರು, ಕೇರಳದ ಕಾಸರಗೋಡು,ಆದೂರು, ಕಣ್ಣೂರು,ಅಲಕ್ಕೋಡು, ಎರ್ನಾಕುಳಂ ಮೊದಲಾದ ಕಡೆಗಳಿಗೆ ತೆರಳಿ ಆರೋ ಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದವು. ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಠಾಣೆಯ ಎಎಸ್ಐ ದುಗ್ಗಪ್ಪ ಗೌಡ, ಸಿಬ್ಬಂದಿ ಜಯರಾಮ್, ಸ್ಕರಿಯಾ, ಜಗದೀಶ್, ದಾಮೋದರ್,ರಾಜೇಶ್.ಎಸ್,ರೇವತಿ,ಮಂಜುನಾಥ್,ಚೋಳಪ್ಪ, ಹೇಮಾವತಿ, ಗೀತಾ ಮತ್ತು ಕಂಪ್ಯೂಟರ್ ವಿಭಾಗದ ಸಿಬ್ಬಂದಿ ಸಂಪತ್
ಮತ್ತು ದಿವಾಕರ್ ಪಾಲ್ಗೊಂಡಿದ್ದರು.
ಪೊಲೀಸರು ವಶಕ್ಕೆ ತೆಗೆದುಕೊಂಡು ಶಂಕಿತ ಆರೋಪಿಯನ್ನು ವಿಚಾರಣೆ ವೇಳೆ ಆತ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದ. ಪೊಲೀಸರು ಆತನನ್ನು ಬಂಧಿಸಿ ಪುತ್ತೂರು ನಗರ ಠಾಣೆಗೆ ಶನಿವಾರ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ನ್ಯಾಯಾಲಯ ಆರೋಪಿಯನ್ನು 5 ದಿನಗಳ ಕಸ್ಟಡಿಗೆ ನೀಡಿದೆ.