ಬೈಂದೂರು,ಅ 28 (MSP): ಭೂಸುಧಾರಣಾ ಕಾಯಿದೆಯ ಮೂಲಕ ಉಳುವವರಿಗೆ ಭೂಮಿ, ಸರ್ಕಾರಿ ಭೂಮಿ ಆಕ್ರಮಿಸಿ ನೆಲೆನಿಂತ ಭೂರಹಿತರಿಗೆ ಅದರ ಹಕ್ಕು, ಎಲ್ಲ ಜಾತಿ, ವರ್ಗಗಳ ಬಡವರಿಗೂ ವೃತ್ತಿಪರ ಶಿಕ್ಷಣದ ಅವಕಾಶ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ವಸತಿ ಯೋಜನೆ, ವಿಶೇಷ ಘಟಕ ಯೋಜನೆ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಜನರ ಕಲ್ಯಾಣದಂತಹ ಸಾಮಾಜಿಕ ನ್ಯಾಯಪರ ಯೋಜನೆಗಳ ಮೂಲಕ ಜನರ ಕಲ್ಯಾಣ ಸಾಧಿಸಿದ ಹೆಗ್ಗಳಿಕೆಗೆ ಕಾಂಗ್ರೆಸ್ ಪಾತ್ರವಾಗಿದೆ. ಕೇಂದ್ರದ ಇಂದಿನ ಮತ್ತು ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಇಂತಹ ಒಂದೇಒಂದು ಉತ್ತಮ ಕೆಲಸ ಮಾಡಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು. ಬೈಂದೂರಿನಲ್ಲಿ ಅ.27 ರ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಲಾಗಿದೆ. ಇದು ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಜನಪ್ರಿಯ ಯೋಜನೆಗಳನ್ನು ಮುಂದುವರಿಸಲಿದೆ. ಜತೆಗೆ ಜೆಡಿಎಸ್ ಪ್ರಣಾಳಿಕೆಯ ಕಾರ್ಯಕ್ರಮಗಳನ್ನೂ ಅನುಷ್ಠಾನಿಸಲಿದೆ. ಈಗಾಗಲೇ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳನ್ನು ಗುರುತಿಸಿಕೊಳ್ಳಲಾಗಿದೆ. ಆ ಮೂಲಕ ರಾಜ್ಯವನ್ನು ಇನ್ನಷ್ಟು ಪ್ರಗತಿಯತ್ತ ಒಯ್ಯಲು ಸಾಧ್ಯವಾಗಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಎರಡು ಪಕ್ಷಗಳನ್ನು ಪ್ರತಿನಿಧಿಸುತ್ತಿರುವ ಜನಾನುರಾಗಿ ಯುವನಾಯಕ ಮಧು ಬಂಗಾರಪ್ಪ ಗೆಲುವು ನಿಶ್ಚಿತವಾಗಿದ್ದು, ಅವರಿಂದ ಖಂಡಿತ ಉತ್ತಮ ಕೆಲಸ ಆಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಭರವಸೆಗಳನ್ನು ಈಡೇರಿಸದೆ ಮತದಾರರನ್ನು ವಂಚಿಸಿದ ಕೇಂದ್ರದ ನರೇಂದ್ರ ಮೋದಿ ಆಡಳಿತಕ್ಕೆ ಅಂತ್ಯ ಕಾಣಿಸುವ ಉದ್ದೇಶದಿಂದ ವಿರೋಧ ಪಕ್ಷಗಳ ಜತೆ ಸೇರಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದೆ. ಇದು ಮಂಬರುವ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ. ಮೋದಿ ದುರಾಡಳಿತ, ಅದು ಮಾಡಿರುವ ಶತಮಾನದ ಅತ್ಯಂತ ದೊಡ್ದೆನಿಸಿದ ರಫೇಲ್ ಹಗರಣ, ಈಗ ನಡೆಯುತ್ತಿರುವ ಸಿಬಿಐ ನಾಟಕ, ರಾಜ್ಯದ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಲ್ಲಿನ ಬಿಜೆಪಿ ಸಂಸದರ ವೈಫಲ್ಯ ಎಲ್ಲ ಸೇರಿ ಮೋದಿ ಜನರ ನಂಬಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ಉಪ ಚುನಾವಣೆಯಲ್ಲಿ ಮತದಾರರು ಮೈತ್ರಿ ಅಭ್ಯರ್ಥಿಗಳತ್ತ ಒಲವು ತೋರುವುದು ಖಚಿತ’ ಎಂದರು.
ಐದು ರಾಜ್ಯಗಳಲ್ಲಿ ಸದ್ಯವೇ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿ ಕೂಟ ವಿಜಯ ಸಾಧಿಸಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಮಹಾಮೈತ್ರಿಗೆ ಜಯ ಲಭಿಸುವುದೂ ಖಚಿತ. ನರೇಂದ್ರ ಮೋದಿ ವಿದೇಶದಲ್ಲಿರುವ ಭಾರತೀಯರ ಕಾಳಧನ ತರುವ ಭರವಸೆ ನೀಡಿದ್ದರು. ಅದು ಈಡೇರುವ ಬದಲಿಗೆ ಇಲ್ಲಿಂದ ಕಪ್ಪುಹಣ ವಿದೇಶಕ್ಕೆ ಹೋಗಿದೆ. ನಾನು ಅಧ್ಯಕ್ಷ ಆಗಿರುವ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಇದರ ಕುರಿತು ಮೂರು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅದು ಅನುಷ್ಠಾನ ಆಗಿಲ್ಲ. ಮನಮೋಹನ ಸಿಂಗ್ ನೇತೃತ್ವದ ಕೇಂದ್ರದ ಕಾಂಗ್ರೆಸ್ ಸರ್ಕಾರ, ರಾಜ್ಯದ ಸಿದ್ಧರಾಮಯ್ಯ ಸರ್ಕಾರ ಮತ್ತು ಪ್ರಸಕ್ತ ಕುಮಾರಸ್ವಾಮಿ ಸರ್ಕಾರ ರೈತರ ಸಾಲ ಮನ್ನಾ ಮಾಡಿವೆ. ದೇಶದಲ್ಲಿ ಈ ವರೆಗೆ 36 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಮೋದಿಯವರು ರೈತರ ಸಾಲ ಮನ್ನಾ ಮಾಡುವ ಬದಲಿಗೆ ಉದ್ಯಮಪತಿಗಳ ರೂ1.24 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ನೋಟ್ ಅಮಾನ್ಯಗೊಳಿಸಿ ಕಪ್ಪುಹಣ ಹೊರತರುವ, ಭ್ರಷ್ಟಾಚಾರ ತಡೆಯುವ, ಭಯೋತ್ಪಾದನೆ ತೊಡೆದುಹಾಕುವ ಮಾತು ಹೇಳಿದರು. ಆದರೆ ಇದಾವುದೂ ಆಗಲಿಲ್ಲ. ನೋಟ್ ಬದಲಿಸಿಕೊಳ್ಳಲು ಬ್ಯಾಂಕ್ ಮುಂದೆ ಸರತಿಯಲ್ಲಿ ನಿಂತ 125 ಜನರು ಸತ್ತರು. ಅಸಂಘಟಿತ ವಲಯದ ಶೇ೪೦ ಕೆಲಸಗಾರರು ಉದ್ಯೋಗ ಕಳೆದುಕೊಂಡರು. ಇವು ನಾಲ್ಕೂವರೆ ವರ್ಷಗಳ ಮೋದಿ ಆಡಳಿತದ ಕೊಡುಗೆ’ ಎಂದು ಮೊಯಿಲಿ ವ್ಯಂಗ್ಯವಾಡಿದರು.
ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಗೋಪಾಲ ಭಂಡಾರಿ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೆ ಗೌಡ, ಅಭ್ಯರ್ಥಿ ಮಧು ಬಂಗಾರಪ್ಪ, ಪಕ್ಷದ ನಾಯಕರಾದ ಜಿ. ಎ. ಬಾವಾ ಇದ್ದರು.