ಪುಂಜಾಲಕಟ್ಟೆ, ಅ 28 (MSP): ಬಂಟ್ವಾಳ ತಾಲೂಕಿನ ಕಾವಳಮಡೂರು ಗ್ರಾಮ ಬರ್ಕಟ ಎಂಬಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮನೆಯೇ ಹೊತ್ತಿ ಉರಿದು ಮಹಿಳೆಯೊಬ್ಬರು ಸಜೀವ ದಹನಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಬಾಬು ದೇವಾಡಿಗ ಅವರ ಪುತ್ರಿ ರೇವತಿ (40) ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಸಮೀಪದ ಮನೆಯೊಂದರಲ್ಲಿ ಅವಿವಾಹಿತೆಯಾಗಿದ್ದ ಇವರು ಏಕಾಂಗಿಯಾಗಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಮನೆಯೊಳಗೆ ಕಟ್ಟಿಗೆ ರಾಶಿ ಹಾಕಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಕಟ್ಟಿಗೆ ರಾಶಿಗೆ ತಗುಲಿ ಮನೆಗೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ. ಕಟ್ಟಿಗೆ ರಾಶಿ ಹಾಕಿದ್ದ ಸನಿಹದಲ್ಲೇ ರೇವತಿ ಅವರು ಮಲಗಿದ್ದ ಕಾರಣ ಅವರಿಗೂ ಬೆಂಕಿ ತಗುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ವಾರದ ಹಿಂದೆಯಷ್ಟೇ ಈ ಮನೆಗೆ ಸಿಡಿಲು ಬಡಿದಿದ್ದು ಈ ಘಟನೆಯಿಂದ ಇವರು ಭಯಬೀತರಾಗಿದ್ದರು ಎಂದು ತಿಳಿದು ಬಂದಿದೆ.
ತಡರಾತ್ರಿ ಮನೆ ಹೊತ್ತಿ ಉರಿಯುದನ್ನು ಕಂಡ ಊರವರು ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರೂ ಮಹಿಳೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ರೇವತಿ ಅವರ ಮೃತದೇಹ ಸಂಪೂರ್ಣ ಸುಟ್ಟು ಹೋಗಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆ ಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.