ವರದಿ: ಮಾನಸ
ಮಂಗಳೂರು, ಅ 28: 1971ರಲ್ಲಿ 'ಎನ್ನ ತಂಗಡಿ' ಪ್ರಥಮ ತುಳು ಸಿನೆಮಾದೊಂದಿಗೆ ಉದಯವಾದ ತುಳು ಚಿತ್ರರಂಗಕ್ಕೆ 47 ವರ್ಷಗಳ ಇತಿಹಾಸವಿದೆ. ಇದೇ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಲು ಸಿದ್ದವಾಗಿದೆ ಸಾಕ್ಷಾತ್ ಮಲ್ಪೆ ನಿರ್ದೇಶನದ 'ಕರ್ಣೆ'. ಕಾರಣ ತುಳು ಚಿತ್ರರಂಗದ ಇತಿಹಾಸದಲ್ಲಿ 100 ಚಿತ್ರವಾಗಿ ಕರ್ಣೆ ತನ್ನ ಮೈಲುಗಲ್ಲುನ್ನು ಸ್ಥಾಪಿಸಲಿದೆ.
ಕೋಸ್ಟಲ್ ವುಡ್ ಸಿನಿಮಾದಲ್ಲಿ ಕೋರಿ ರೊಟ್ಟಿ, ಕರ್ಣೆ, ಉಮಿಲ್ ಈ ಮೂರು ಚಿತ್ರಗಳ ಪೈಕಿ ನೂರನೇ ಚಿತ್ರ ಯಾವುದಾಗಬಹುದೆಂಬ ಕುತೂಹಲ ಸಿನಿಮಾ ಪ್ರೇಮಿಗಳಿಗಿತ್ತು. ಇದೀಗ ಕರ್ಣೆ ಚಿತ್ರತಂಡ ತುಳು ಚಿತ್ರರಂಗದ ಇತಿಹಾಸದಲ್ಲಿ 100ನೇ ಸಿನಿಮಾ ಆಗಿ ಬಿಡುಗಡೆಯಾಗುತ್ತಿರುವುದಾಗಿ ಘೋಷಿಸಿದೆ.
ನವೆಂಬರ್ 9 ರಂದು ತೆರೆಕಾಣುತ್ತಿರುವ ಚಿತ್ರದ ದ್ವನಿಸುರುಳಿ ನ.1 ರಂದು ಬೆಂಗಳೂರಿನಲ್ಲಿ 1000 ಮಕ್ಕಳಿಂದ ಬಿಡುಗಡೆಗೊಳ್ಳಲಿದೆ. ಹೀಗಾಗಿ ಹಾಡುಗಳ ಬಿಡುಗಡೆ ಸಮಾರಂಭದಲ್ಲೂ ವಿಶೇಷತೆಯನ್ನು ಮೆರೆದಿದೆ ಕರ್ಣೆ ಚಿತ್ರತಂಡ.
ರಕ್ಷಿತ್ ಎಸ್. ಕೋಟ್ಯಾನ್ ಮತ್ತು ರಕ್ಷಿತ್ ಎಚ್.ಸಾಲ್ಯಾನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ನಾಯಕನಾಗಿ ಅವರಿಗೆ ಜತೆಯಾಗಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಾರಾಗಣದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಗೋಪಿನಾಥ್ ಭಟ್, ವಿಸ್ಮಯ ವಿನಾಯಕ್, ಮಂಜು ರೈ ಮೂಳೂರು, ಸಾಯಿಕೃಷ್ಣ ಕುಡ್ಲ ಮೊದಲಾದವರಿದ್ದಾರೆ.
ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿರಲಿದ್ದು ದೇವದಾಸ್ ಕಾಪಿಕಾಡ್, ಸಾಕ್ಷಾತ್ ಮಲ್ಪೆ ಮತ್ತು ವಿಜಯಕುಮಾರ್ ಕೊಡಿಯಾಲಬೈಲ್ ಅವರ ಸಾಹಿತ್ಯವಿದೆ. ರಘು ಧನ್ವಂತ್ರಿ ಸಂಗೀತ ಸ್ವರ ಸಂಯೋಜನೆ ಮಾಡಿದ್ದಾರೆ. ಆರೂರು ಸುಧಾಕರ ಶೆಟ್ಟಿಇವರ ಛಾಯಾಗ್ರಹಣವಿದೆ. ಚಿತ್ರವು ಮೊಗವೀರ ಜನಾಂಗದ ಕುರಿತ ಕಥೆಯನ್ನು ಒಳಗೊಂಡಿದೆ.