ಬಂಟ್ವಾಳ, ಅ 28(SM): ವಿವಿಧ ಕಾರಣಗಳಿಂದ ತೆರವಾಗಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಂಗಬೆಟ್ಟು ತಾಲೂಕು ಪಂಚಾಯತ್ ನ ಉಪಚುನಾವಣೆ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಶೇ. 73.04ರಷ್ಟು ಮತದಾನವಾಗಿದೆ.
ಉಪಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಂತಿಯುತ ಮತದಾನ ನಡೆದಿದೆ. ಇಂದು ಮುಂಜಾನೆಯಿಂದಲೇ ಮತದಾರರು ಮತಗಟ್ಟೆಗೆ ತೆರಳಿ ಮತಚಲಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಿಗ್ಗೆ 10:30ಕ್ಕೆ ಸುಮಾರಿಗೆ ಶೇ. 25ರಷ್ಟು ಮತದಾನವಾಗಿತ್ತು. ಇಂದು ರವಿವಾರವಾಗಿದ್ದರಿಂದ ಹಲವು ಶುಭ ಕಾರ್ಯಕ್ರಮಗಳಿದ್ದ ಕಾರಣ ಮಧ್ಯಾಹ್ನದವರೆಗೆ ಮತದಾನ ವಿರಳವಾಗಿತ್ತು. ಮಧ್ಯಾಹ್ನದ ಬಳಿಕ ಮತದಾನ ಚುರುಕು ಪಡೆದುಕೊಂಡಿತು.
ಈ ನಡುವೆ ಸುಮಾರು 90 ವರ್ಷದ ವೃದ್ಧೆಯೊಬ್ಬರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಗಮನ ಸೆಳೆದರು.
ಒಟ್ಟು 10 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಶಾಂತಿಯುತ ಮತದಾನಕ್ಕಾಗಿ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು. ಇನ್ನು ಅಕ್ಟೋಬರ್ 31ರಂದು ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಜರಗಲಿದೆ.