ಕಾಸರಗೋಡು, ಅ 28(SM): ಮಂಜೇಶ್ವರ ವಿಧಾನಸಭೆ ಚುನಾವಣೆ ಸಂದರ್ಭ ಅಕ್ರಮ ನಡೆದಿದೆ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಹೂಡಿದ್ದ ದಾವೆಯನ್ನು ಹಿಂತೆಗೆದುಕೊಳುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ರವರ ನಿಧನದಿಂದ ತೆರವಾಗಿರುವ ಮಂಜೇಶ್ವರ ಕ್ಷೇತ್ರದ ಉಪಚುನಾವಣೆ ಅನಿಶ್ಚಿತತೆಗೆ ಸಿಲುಕಿದೆ.
2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿದ್ದ ಪಿ.ಬಿ. ಅಬ್ದುಲ್ ರಜಾಕ್ ಅವರು ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ ಕೇವಲ 89 ಮತಗಳ ಅಂತದಿಂದ ಗೆಲುವು ಸಾಧಿಸಿದ್ದರು. ನಕಲಿ ಮತದಾನದಿಂದ ಯುಡಿಎಫ್ ಗೆಲುವು ಸಾಧಿಸಿದ್ದಾಗಿ ಆರೋಪಿಸಿ ಕೆ. ಸುರೇಂದ್ರನ್ ಹೈಕೋರ್ಟ್ ಮೊರೆ ಹೋಗಿದ್ದರು. ತನ್ನನ್ನು ವಿಜಯಿ ಎಂದು ಘೋಷಿಸುವಂತೆ ದಾವೆ ಹೂಡಿದ್ದರು.
ನಕಲಿ ಮತದಾನ ಮಾಡಿದ್ದಾರೆ ಎಂದು 259 ಮಂದಿಯ ಪಟ್ಟಿಯನ್ನು ಹೈಕೋರ್ಟಿಗೆ ನೀಡಿದ್ದರು. ಈ ಪೈಕಿ 175 ಮಂದಿಯಿಂದ ಸಾಕ್ಷಿ ಕಲೆಹಾಕಲಾಗಿದೆ. 67 ಮಂದಿಗೆ ಸಮನ್ಸ್ ಕಳುಹಿಸಲಾಗಿದೆ. ವಿಚಾರಣೆ ಅಂತಿಮ ಹಂತದಲ್ಲಿರುವಂತೆ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ನಿಧನ ಹೊಂದಿದ್ದರು. ಈ ಹಿನ್ನೆಲೆ ಆಯ್ಕೆ ಪ್ರಶ್ನಿಸಿ ಬಿಜೆಪಿಯ ಕೆ. ಸುರೇಂದ್ರನ್ ಸಲ್ಲಿಸಿರುವ ಚುನಾವಣೆ ತಕರಾರು ದಾವೆಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂದು ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ ಸುರೇಂದ್ರನ್ ಬಳಿ ಸ್ಪಷ್ಟನೆ ಕೇಳಿತ್ತು.
ಬುಧವಾರದಂದು ಮತ್ತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಈ ನಡುವೆ ಸ್ಪಷ್ಟನೆ ನೀಡಿರುವ ಸುರೇಂದ್ರನ್ ದಾವೆ ಹಿಂತೆಗೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಪ್ರಕರಣ ಸುಲಲಿತವಾಗಿ ಪೂರ್ಣಗೊಳಿಸಲು ಯುಡಿಎಫ್ ಮತ್ತು ಎಲ್ ಡಿಎಫ್ ಸಹಕಾರ ನೀಡುವಂತೆ ಅಭಿಪ್ರಾಯ ಪಟ್ಟಿದ್ದಾರೆ.