ಬಂಟ್ವಾಳ, ಅ 28(SM): ತಾಲೂಕಿನ ಕಡೇಶ್ವಾಲ್ಯ ಸಮೀಪ ಕಲ್ಲಾಜೆ ಎಂಬಲ್ಲಿ ರಿಕ್ಷಾ ಚಾಲಕರು ಬಾಲಕನೋರ್ವನಿಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಕ್ಟೋಬರ್ 27ರಂದು ಘಟನೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಡೇಶ್ವಾಲ್ಯ ಸಮೀಪ ಕಲ್ಲಾಜೆಯ ದಿ.ಇಬ್ರಾಹಿಂ ಎಂಬವರ ಪುತ್ರನ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಬುಡೋಳಿ ಸಮೀಪದ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ.
ಶನಿವಾರ ಸಂಜೆ ಕಡೇಶ್ವಾಲ್ಯ ಸಮೀಪ ಕಲ್ಲಾಜೆಯ ಮನೆ ಸಮೀಪದ ಅಂಗಡಿಗೆಂದು ತೆರಳಿದ ಬಾಲಕ, ಬಳಿಕ ಕಡೇಶ್ವಾಲ್ಯ ರಿಕ್ಷಾ ಪಾರ್ಕ್ ನಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದಲ್ಲಿ ಚಾಲಕರು ಇಟ್ಟಿರುವ ಚಿಲ್ಲರೆ ಹಣವನ್ನು ಕೈಹಾಕಿ ತೆಗೆದುಕೊಂಡು ಹೋಗಿದ್ದ. ಇದನ್ನು ಗಮನಿಸಿದ ರಿಕ್ಷಾ ಚಾಲಕರು ಬಾಲಕ ನನ್ನು ಹಿಡಿದಿದ್ದಾರೆ. ಹಾಗೂ ಅತನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಮನೆಯಲ್ಲಿ ಈ ವಿಷಯ ತಿಳಿಸಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಈ ಎಲ್ಲಾ ಘಟನೆಗಳು ಮುಗಿದ ಬಳಿಕ ಸಿದ್ದೀಕ್ ನ ಅಣ್ಣ ಕೇರಳದಲ್ಲಿ ಕೆಲಸ ಮಾಡುತ್ತಿದ್ದು ಇಂದು ಊರಿಗೆ ಆಗಮಿಸಿ ರಿಕ್ಷಾ ಚಾಲಕರನ್ನು ಮಾತುಕತೆಗೆಂದು ಮನೆಗೆ ಕರೆದಿದ್ದಾರೆ. ಆದರೆ ರಿಕ್ಷಾ ಚಾಲಕರು ಮನೆಗೆ ತೆರಳಲು ಒಪ್ಪದೆ ಇದ್ದುದನ್ನು ಗಮನಿಸಿ ಸಂಜೆಯ ವೇಳೆ ಬಂಟ್ವಾಳ ಸಮುದಾಯ ಆಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಪೋಲೀಸ್ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರು ರವಿವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಮಾಹಿತಿ ಕಲೆಹಾಕಿದ್ದಾರೆ. ರಿಕ್ಷಾ ಚಾಲಕ ರಾಜೇಶ್ ಮತ್ತು ಮಹೇಶ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.