ಕುಂದಾಪುರ, ಅ 29(MSP): ಶಿವಮೊಗ್ಗ ಲೋಕಸಭಾ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ಹಲವು ವರ್ಷಗಳಿಂದ ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದಾಗಿ ಆರೋಪಿಸಿ ಗ್ರಾಮಸ್ಥರು ಅಲ್ಲಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಬೈಂದೂರಿನ ಬಿಜೂರು ಎಂಬಲ್ಲಿಯ ನಾಲ್ಕನೇ ವಾರ್ಡಿನ ಜನ ಚುನಾವಣಾ ಬಹಿಷ್ಕಾರದ ಬೆದರಿಕೆ ಹಾಕಿ ಪ್ರತಿಭಟನೆ ನಡೆಸಿದ ಘಟನೆಯೂ ಭಾನುವಾರ ನಡೆದಿದೆ.
ಬಿಜೂರು ಗ್ರಾಮದ ಶೆಟ್ರಕೇರಿ ಎಂಬಲ್ಲಿರುವ ಗ್ರಾಮಸ್ಥರು ಅಭಿವೃದ್ಧಿ ಕಾಣದ ಗ್ರಾಮದ ಬಗ್ಗೆ ಶಾಸಕರು ಹಾಗೂ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಒಂಭತ್ತೂವರೆ ವರ್ಷ ಸಂಸದರಾಗಿದ್ದ ರಾಘವೇಂದ್ರ ಹಾಗೂ ಯಡಿಯೂರಪ್ಪ ಒಮ್ಮೆಯೂ ಈ ಕಡೆ ತಲೆ ಹಾಕಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಸ್ಥಳೀಯ ಶಾಸಕರೂ ಈ ಬಗ್ಗೆ ಗಮನ ಹರಿಸಿಲ್ಲ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಒಂದು ಪೈಸೆಯ ಅನುದಾನವನ್ನೂ ಶೆಟ್ರಕೇರಿ ವಾರ್ಡಿಗೆ ಬಳಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದು, ಈ ಬಾರಿಯ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ನಡೆಸಿದ್ದಾರೆ.
ಭಾನುವಾರ ಬೆಳಿಗ್ಗೆ ಬಹಿರಂಗವಾಗಿ ಫ್ಲೇ ಕಾರ್ಡುಗಳಲ್ಲಿ ಮತದಾನ ಬಹಿಷ್ಕಾರದ ಘೋಷಣೆ ಮೂಡಿಸಿರುವ ವಾರ್ಡ್ ನಾಗರಿಕರ ಈ ನಿರ್ಧಾರ ಚುನಾವಣಾ ಅಧಿಕಾರಿ ವರ್ಗ ಮತ್ತು ಕಣದಲ್ಲಿರುವ ಪಕ್ಷಗಳ ಮುಖಂಡರುಗಳಿಗೆ ತಲೆ ನೋವು ತಂದಿದೆ. ಚುನಾವಣೆಯ ಸಂದರ್ಭದಲ್ಲಿ ಮತಯಾಚನೆಗೆ ಬರುವ ರಾಜಕಾರಣಿಗಳು ಚುನಾವಣೆ ಮುಗಿದ ಬಳಿಕ ಜನರ ಸಮಸ್ಯೆಯ ಬಗ್ಗೆ ಗಮನಹರಿಸದೇ ನಿಲರ್ಕ್ಷ್ಯ ಮಾಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಅನುದಾನ ಬರುತ್ತಿದ್ದರೂ ಪಂಚಾಯಿತಿ ವ್ಯಾಪ್ತಿಯ ನಾಲ್ಕನೇ ವಾರ್ಡಿನಲ್ಲಿ ಯಾವುದೇ ಅನುದಾನ ಬಳಕೆಯಾಗುತ್ತಿಲ್ಲ. ಕುಡಿಯುವ ನೀರು, ದಾರಿದೀಪದಂತಹ ಮೂಲಭೂತ ಸೌಕರ್ಯಗಳನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಶೆಟ್ರಕೇರಿ ಪರಿಸರದ ನಾಗರಿಕರು ಆರೋಪಿಸಿದ್ದಾರೆ.