ಉಡುಪಿ, ಅ 29(MSP): ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನು ಹಿಂದೂ ಪೀಠವಾಗಿಸ್ತೇವೆ ಎಂಬ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಉಡುಪಿಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ ಅವರು, ರಕ್ತಪಾತದ ಈ ಹೇಳಿಕೆಯನ್ನು ಯಾವುದೇ ಪ್ರಜ್ಞಾವಂತ ಭಾರತೀಯ ನಾಗರಿಕನೂ ಬೆಂಬಲಿಸಲು ಸಾಧ್ಯವಿಲ್ಲ. ರಕ್ತಪಾತದಿಂದ ಇಂತಹ ಸಮಸ್ಯೆಯನ್ನು ಬಗೆಹರಿಸಲು ಪ್ರಮೋದ್ ಮುತಾಲಿಕ್ ಅವರಂತಹ ಸಾವಿರ ನಾಯಕರು ಬಂದರು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ರೀತಿಯ ಸೂಕ್ಷ್ಮ ಸಮಸ್ಯೆಗಳನ್ನು ರಕ್ತಪಾತದ ಬದಲಾಗಿ ಸೌಹಾರ್ದತೆಯಿಂದ ಪ್ರೀತಿ ಪೂರ್ವಕವಾಗಿ ಅಥವಾ ಕಾನೂನು ಸುವ್ಯವಸ್ಥೆ - ನ್ಯಾಯಾಂಗದ ತೀರ್ಪಿನ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇಂತಹ ಉದ್ವೇಗ ಭರಿತ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವಂತಹ ಪ್ರಯತ್ನವನ್ನು ಮುತಾಲಿಕ ರವರಂತಹ ನಾಯಕರುಗಳು ಇನ್ನಾದರೂ ನಿಲ್ಲಿಸುವುದು ಒಳ್ಳೆಯದು.
ದೇವರ ಸ್ಥಾನವನ್ನು ದೇವರಿಗೆ ಮರಳಿ ಒದಗಿಸಿಕೊಡಲು ಪ್ರಮೋದ್ ಮುತಾಲಿಕ್ ಯಾ ಯಾವೊಬ್ಬ ಮನುಷ್ಯನಿಂದಲೂ ಸಾಧ್ಯವಿಲ್ಲ. ಒಂದು ವೇಳೆ ದೇವರ ನೆಲೆ, ಶಕ್ತಿ ಅಲ್ಲಿದ್ದರೆ ಆ ಸ್ಥಾನವನ್ನು ವಾಪಾಸು ಪಡೆದುಕೊಳ್ಳಲು ದೇವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ತನ್ನ ಪಾಡಿಗೆ ತಾನು ಸುಮ್ಮನಿರುವಾಗ ಇಂಥವರಿಗೆ ಇದೆಲ್ಲ ಬೇಕಾ ಎಂದು ಅನ್ಸಾರ್ ಅಹ್ಮದ್ ಪ್ರಶ್ನಿಸಿದ್ದಾರೆ.