ಮಂಗಳೂರು, ಅ 29(MSP): ಕುಕ್ಕೆ ಸುಬ್ರಹ್ಮಣ್ಯ ಮಠದ ವಿಚಾರದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಮುಖಂಡರಾದ ಚೈತ್ರಾ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ಗುಂಪುಗಳ ನಡುವಿನ ಭಿನ್ನಮತ ಶಮನಕ್ಕೆ ಸಂಘ ಪರಿವಾರ ಮುಂದಾಗಿದ್ದು, ಪ್ರಕರಣ ಸುಖಾಂತ್ಯ ಕಾಣುವ ಸೂಚನೆ ಕಂಡುಬಂದಿದೆ.
ಚೈತ್ರಾ ಕುಂದಾಪುರ ಗುಂಪಿನಿಂದ ಐವರು ಸದಸ್ಯರು ಹಾಗೂ ಗುರುಪ್ರಸಾದ್ ಪಂಜ ಗುಂಪಿನ ಐವರು ಸದಸ್ಯರನ್ನ ಮುಂದುವರಿಸಿಕೊಂಡು, ಸುಮಾರು 12 ಮಂದಿ ಸಂಘದ ಹಿರಿಯ ಸದಸ್ಯರ ಉಪಸ್ಥಿತಿಯಲ್ಲಿ ಇನ್ನೆರಡು ದಿನಗಳಲ್ಲಿ ನಗರದಲ್ಲಿ ಸಂಧಾನ ಸಭೆ ನಡೆಯುವ ಸಾಧ್ಯತೆ ಇರುವುದಾಗಿ ಸಂಘದ ಮೂಲ ತಿಳಿಸಿದೆ.
ಸಂಧಾನ ಬೈಠಕ್ನಲ್ಲಿ ಭಾಗವಹಿಸಲು ಉಭಯ ತಂಡದ ಐವರು ಸದಸ್ಯರು ಸಿದ್ಧರಾಗಿರುವಂತೆ ಸಂಘದ ಹಿರಿಯ ಮುಖಂಡರಿಂದ ಆದೇಶ ರವಾನೆಯಾಗಿದೆ. ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಗುರು ಪ್ರಸಾದ್ ಪಂಜ ಹಾಗೂ ಕರಾವಳಿಯಲ್ಲಿ ಹಿಂದು ಸಂಘಟನೆಯ ಫೈರ್ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ನಡುವೆ ಸುಬ್ರಹ್ಮಣ್ಯದಲ್ಲಿ ಇತ್ತೀಚೆಗೆ ಸಂಘರ್ಷ ಹಾಗೂ ದಾಳಿ ನಡೆದಿತ್ತು.
ಸಂಘದ ಒಳಗಿನ ಗುಂಪು ಘರ್ಷಣೆ , ವ್ಯಾಜ್ಯ ಶಿಕ್ಷೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವುದು ಸಂಘದ ಹಿರಿಯರ ಕಾಳಜಿ . ಪ್ರಕರಣದಲ್ಲಿ ಎರಡು ಗುಂಪುಗಳಿಗೂ ನಷ್ಟವಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಉಭಯ ಕಡೆಯ ಸದಸ್ಯರಿಗೂ ಪ್ರಕರಣ ಮುಂದುವರಿಸಲು ಆಸಕ್ತಿ ಇದ್ದಂತೆ ಕಂಡುಬರುತ್ತಿಲ್ಲ. ಒಂದೆಡೆ ಚೈತ್ರಾ ತಂಡ ಸದಸ್ಯರು ಬಂಧನಕ್ಕೆ ಒಳಗಾಗಿದ್ದಾರೆ. ಗುರುಪ್ರಸಾದ್ ಗುಂಪು ಯಾವುದೇ ಸಂದರ್ಭದಲ್ಲಾದರೂ ಬಂಧನಕ್ಕೆ ಒಳಗಾಗುವ ಭೀತಿ ಎದುರಿಸುತ್ತಿದೆ. ಹೀಗಾಗಿ ಸಂಧಾನ ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿದೆ.