ಬಳ್ಳಾರಿ,ಅ 29(MSP): ಮಾಜಿ ಮುಖ್ಯಮಂತ್ರಿ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಸಿದ್ದರಾಮಯ್ಯಗೆ ಮಾನ ಮಾರ್ಯದೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಳ್ಳಾರಿ ಲೋಕಸಭಾ ಉಪಚುನಾವಣೆಯ ಪ್ರಚಾರಕ್ಕೆ ಶಾಸಕ.ಬಿ ರಾಮುಲು ಅವರಿಗೆ ಸಾಥ್ ನೀಡಲು ಗಡಿ ಪ್ರದೇಶವಾದ ಮೊಳಕಾಲ್ಮೂರಿನಲ್ಲಿ ವಾಸ್ತವ್ಯ ಹೂಡಿರುವ ಅವರು ಅ.29 ರ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನನ್ನ ಮನೆಗಳ ಮೇಲೆ ದಾಳಿ ಮಾಡಿಸಿದರು.. ಆದರೆ ಒಂದು ಪೈಸೆಯೂ ಅಕ್ರಮ ಹಣವಾದರೂ ಸಿಕ್ಕಿತೇ? ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ ಸಿದ್ದರಾಮಯ್ಯ ಪಾದಯಾತ್ರೆ ಮಾಡಿಕೊಂಡು ಬಳ್ಳಾರಿಗೆ ಬಂದು ಸುಳ್ಳು ಆರೋಪ ಮಾಡಿದ್ದಾರೆ, ಸತ್ಯ ಶೋಧನೆ ಎಂದು ಹೇಳುತ್ತಾ ಸತ್ಯವನ್ನು ಮರೆಮಾಚಿ ನಾಲ್ಕು ವರ್ಷ ಜೈಲಿನಲ್ಲಿ ಬಂಧಿಯಾಗಿಸಿದರು. ನನ್ನ ಜೀವಮಾನದ 4 ವರ್ಷದ ಅಮೂಲ್ಯ ವೇಳೆಯನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ರು. ರೆಡ್ಡಿ ಕುಟುಂಬ 1 ಲಕ್ಷ ಕೋಟಿ ಹಣವನ್ನು ವಾಪಾಸ್ ತರುತ್ತೇವೆ ಎಂದು ಸುಳ್ಳು ಪ್ರಚಾರ ಮಾಡಿದರು. ಆದರೆ ನನ್ನಿಂದ ಎಷ್ಟು ಹಣ ಜಪ್ತಿ ಮಾಡಿದಿರಿ? ಇದನ್ನು ಬಹಿರಂಗ ಪಡಿಸಿ? ಈ ರೀತಿ ಸುಳ್ಳು ಹೇಳಲು ನಿಮಗೆ ನಾಚಿಗೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಬಳ್ಳಾರಿ ಅಭಿವೃದ್ಧಿ ಮಾಡಲಿಲ್ಲ ಎನ್ನುವ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದರು. ನನ್ನ ವಿರುದ್ಧ ಎಷ್ಟು ಸಾವಿರ ಕೋಟಿ ಚಾರ್ಜ್ ಶೀಟ್ ಹಾಕಿದ್ದಾರೆ ಅನ್ನೋದನ್ನ ಜನರಿಗೆ ಬಹಿರಂಗಪಡಿಸಲಿ ಎಂದು ರೆಡ್ಡಿ ಬಹಿರಂಗ ಸವಾಲು ಹಾಕಿದರು. ಸಿದ್ದರಾಮಯ್ಯ ಮಾನವೀಯತೆ ಇಲ್ಲದಂತೆ ಮಾತನಾಡುತ್ತಿದ್ದಾರೆ. ಹಲವು ಬಾರಿ ನಾನು ಸಿದ್ದರಾಮಯ್ಯ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಬೇಕು ಎಂದು ಯೋಚಿಸಿದ್ದೆ. ಆದರೆ ಮಾನವೇ ಇಲ್ಲದವರ ವಿರುದ್ಧ ಮಾನನಷ್ಟ ಯಾಕೆ ಅಂತ ಸುಮ್ಮನಾಗಿದ್ದೆ ಅಂತ ಅವರು ತಿಳಿಸಿದ್ರು.