ಬಾಗಲಕೋಟೆ, ಅ 29(MSP): ಸಮ್ಮಿಶ್ರ ಪಕ್ಷದಲ್ಲಿ ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಿಡಿದುಕೊಂಡು ನಿಂತಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬೆನ್ನ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಕು ಹಿಡಿದುಕೊಂಡು ನಿಂತಿದ್ದಾರೆ. ಇನ್ನು ಸಿದ್ದರಾಮಯ್ಯ ಬೆನ್ನಿಗೆ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಕು ಹಿಡಿದುಕೊಂಡು ನಿಂತಿದ್ದಾರೆ. ಹೀಗಾಗಿ ಬ್ರಹ್ಮ ದೇವ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲು ಅಸಾಧ್ಯ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಬಾಗಲಕೋಟೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಸರ್ಕಾರ ಮುಳುಗಿ ಹೋಗುವ ಹಡಗು. ಈಗ ಒಬ್ಬರನ್ನೊಬ್ಬರು ಬಾಚ್ಕೊಂಡು ಅಪ್ಪಿಕೊಂಡು ನಿಂತಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ. ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ಮತ್ತೆ ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯನವರು ಹಗಲು ಕನಸು ಕಾಣುತ್ತಿದ್ದಾರೆ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಇವರಿಬ್ಬರು ಕಾಂಗ್ರೆಸ್ ಪಕ್ಷದೊಳಗೆ ಕಚ್ಚಾಟವಿದ್ದು, ಇವರು ಇನ್ನು ಮುಂದೆ ಅಪ್ಪಿ ತಪ್ಪಿಯೂ ಅಧಿಕಾರಕ್ಕೆ ಬರುವುದಿಲ್ಲ ಎಂದರು.