ಉಡುಪಿ, ಅ 29(SM): ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನು ಹಿಂದೂ ಪೀಠವಾಗಿಸುವೆ ಎಂಬ ಪ್ರಮೋದ್ ಮುತಾಲಿಕ್ ರವರ ವಿವಾದತ್ಮಾಕ ಹೇಳಿಕೆಗೆ ಉಡುಪಿ ಸಾಮಾಜಿಕ ಕಾರ್ಯಕರ್ತ ಅನ್ಸರ್ ಅಹಮ್ಮದ್ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಅವರ ಹೇಳಿಕೆಯನ್ನು ಯಾವೊಬ್ಬ ಪ್ರಜ್ಞಾವಂತ ಭಾರತೀಯ ನಾಗರಿಕನೂ ಬೆಂಬಲಿಸಲು ಸಾಧ್ಯವಿಲ್ಲ. ರಕ್ತಪಾತದಿಂದ ಇಂತಹ ಸಮಸ್ಯೆಯನ್ನು ಬಗೆಹರಿಸಲು ಪ್ರಮೋದ್ ಮುತಾಲಿಕ್ ರವರಂತಹ ಸಾವಿರ ನಾಯಕರು ಬಂದರು ಸಾಧ್ಯವಿಲ್ಲ.
ಬದಲಾಗಿ ಸೌಹಾರ್ದತೆಯಿಂದ ಪ್ರೀತಿಯಿಂದ ಕಾನೂನು ಸುವ್ಯವಸ್ಥೆ-ನ್ಯಾಯಾಂಗದ ತೀರ್ಪಿನ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಒಳಿತು. ಇಂತಹ ಉದ್ವೇಗ ಭರಿತ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವಂತಹ ಪ್ರಯತ್ನವನ್ನು ಮುತಾಲಿಕರಂತಹ ನಾಯಕರುಗಳು ಇನ್ನಾದರೂ ನಿಲ್ಲಿಸಲಿ ಎಂದರು.
ದೇವರ ಸ್ಥಾನವನ್ನು ದೇವರಿಗೆ ಮರಳಿ ಒದಗಿಸಿಕೊಡಲು ಪ್ರಮೋದ್ ಮುತಾಲಿಕ್ ಅಥವಾ ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ದೇವರ ಶಕ್ತಿ ಇದ್ದದ್ದೇ ಹೌದಾದರೆ ಆ ಸ್ಥಾನವನ್ನು ವಾಪಾಸು ಪಡೆದುಕೊಳ್ಳಲು ದೇವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ತನ್ನ ಪಾಡಿಗೆ ತಾನು ಸುಮ್ಮನಿರುವಾಗ ಇಂಥವರಿಗೆ ಇದೆಲ್ಲ ಅಗತ್ಯವಿಲ್ಲ. ಸಮಾಜದಲ್ಲಿ ಶಾಂತಿ ಕೆಡಿಸುವ ಹೇಳಿಕೆಯನ್ನು ಕೊಡುವ ಪರಿಪಾಠವನ್ನು ಮುತಾಲಿಕ್ ಅವರಂತವರು ಮೊದಲು ಬಿಡಲಿ ಎಂದರು.