ಪುತ್ತೂರು,ಅ 30 (MSP): ಪ್ರತಿಷ್ಟಿತ ಜವುಳಿ ಉದ್ಯಮಿ ಸಂಜೀವ ಶೆಟ್ಟಿ ಅವರು ಅ.30ರ ಮಂಗಳವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಹಲವು ದಶಕಗಳಿಂದ ಪುತ್ತೂರಿನಲ್ಲಿ ಮನೆಮಾತಾಗಿರುವ ಎಂ. ಸಂಜೀವ ಶೆಟ್ಟಿ ಅವರಿಗೆ ಇಂದು ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹಾದಿ ಮಧ್ಯೆ ಮೃತಪಟ್ಟಿದ್ದಾರೆ.
ಹಲವು ದಶಕಗಳ ಹಿಂದೆ ಪುತ್ತೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಬಟ್ಟೆ ಅಂಗಡಿಯನ್ನು ತೆರೆಯುವುದರ ಮೂಲಕ ಜವಳಿ ಉದ್ಯಮಕ್ಕೆ ಕಾಲಿಟ್ಟಿದ್ದ ಇವರು ನಂತರದ ದಿನಗಳಲ್ಲಿ ಪುತ್ತೂರು ಹಾಗೂ ಮಂಗಳೂರಿನಲ್ಲಿ ಮದುವೆ ವಸ್ತ್ರಗಳ ಬೃಹತ್ ಭಂಡಾರವನ್ನೇ ತೆರೆದಿದ್ದರು. ಸದಾ ಲವಲವಿಕೆಯಿಂದ ಇರುತ್ತಿದ್ದ ಇವರು ತನ್ನ ಇಳಿವಯಸ್ಸಿನಲ್ಲೂ ಮಳಿಗೆಗೆ ಆಗಮಿಸಿ ಗ್ರಾಹಕರ ಜೊತೆ ಸ್ವತಃ ವ್ಯಾಪಾರ ಮಾಡುತ್ತಿದ್ದರು.