ಮಂಗಳೂರು,ಅ 30 (MSP): ಎಂಟು ತಿಂಗಳಿಂದ ಕುದ್ರೋಳಿ ಕಸಾಯಿಖಾನೆಯಲ್ಲಿ ಗೋವುಗಳ ನಿರಂತರ ಹತ್ಯೆ ನಡೆಯುತ್ತಿದ್ದು ಮಾಹಿತಿ ಹಕ್ಕಿನ ಪ್ರಕಾರ ಸುಮಾರು 2 ಸಾವಿರ ಹಸುಗಳು ಹತ್ಯೆಯಾಗಿರುವುದು ಬಹಿರಂಗವಾಗಿದೆ. ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ವಿರುದ್ದ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಕ್ಷಣ ಎಫ್ ಐ ಆರ್ ದಾಖಲಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿ ನಗರ ಪೊಲೀಸ್ ಆಯುಕ್ತರಿಗೆ ಅ.30 ರ ಸೋಮವಾರ ಮನವಿ ಸಲ್ಲಿಸಲಾಯಿತು.
ಪಾಲಿಕೆ ಅಧೀನದಲ್ಲಿರುವ ಕುದ್ರೋಳಿ ಕಸಾಯಿಖಾನೆಯಲ್ಲಿ ಕಾನೂನಿನ ಪ್ರಕಾರ ವಧೆಗೆ ನಿಷೇಧ ಇರುವ ದನ ಹಾಗೂ ಎಮ್ಮೆ ಕರುಗಳನ್ನು ವಧಿಸಲಾಗುತ್ತಿದೆ. ವಿನಯ್ ಎಲ್.ಶೆಟ್ಟಿ ಎಂಬುವರು ಮಾಹಿತಿ ಹಕ್ಕಿನಲ್ಲಿ ಈ ಮಾಹಿತಿ ಪಡೆದು ನಗರ ಉತ್ತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಠಾಣೆಯಲ್ಲಿ ದೂರಿನ ಪ್ರಕಾರ ಕೇಸು ದಾಖಲಿಸಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ವಿಚಾರ ತಿಳಿದಿದ್ದರೂ ಮ.ನ.ಪಾ ಆಯುಕ್ತರು ಸೇರಿದಂತೆ ಅಧಿಕಾರಿಗಳು ಕುದ್ರೋಳಿ ಕಸಾಯಿಖಾನೆಯಲ್ಲಿ ನಿಷೇಧವಿರುವ ಗೋವುಗಳ ವಧೆಗೆ ಅವಕಾಶ ಮಾಡಿರುವುದು ಕರ್ನಾಟಕ ಗೋ ಹತ್ಯಾ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಸೆಕ್ಷನ್ 4 ಪ್ರಕಾರ ಅಪರಾಧವಾಗಿದೆ.ಆದ್ದರಿಂದ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನಿ ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಲಾಗಿದೆ.