ಉಡುಪಿ, ಅ 30 (MSP): 'ನಾನು ಯಾವುದೇ ತಪ್ಪು ಮಾಡಿಲ್ಲ, ಚುನಾವಣೆ ಸಂದರ್ಭ ವೈಯಕ್ತಿಕ ವಿಚಾರ ಚರ್ಚೆ ಮಾಡಲ್ಲ' ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅ.30 ರ ಮಂಗಳವಾರ ಉಡುಪಿಯ ತ್ರಾಸಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಕುಮಾರ ಬಂಗಾರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಹೇಳಿದ್ದಾರೆ.
ಅ. 29 ರಂದು ಬಹಿರಂಗ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿ ಮಾತಿನ ಭರದಲ್ಲಿ ಕುಮಾರ ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿ ದಿವಂಗತ ಬಂಗಾರಪ್ಪ ಅವರನ್ನು ಕುಮಾರ್ ಬಂಗಾರಪ್ಪ ಅವರು ಮನೆಯಿಂದ ಓಡಿಸಿದ್ದರು ಎಂದು ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸೊರಬ ಶಾಸಕ ಕುಮಾರ್ ಬಂಗಾರಪ್ಪ , ರಾಧಿಕಾ ಅವರ ಹೆಸರು ಬಳಸಿ ಸಿಎಂ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಇತರರ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ,ಹಗುರವಾಗಿ ಮಾತನಾಡುವ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ತಮ್ಮ ಮಾತಿಗೆ ಬೆಲೆ ತೆರಬೇಕಾದೀತು. ಬೇರೆಯವರನ್ನು ಟೀಕಿಸುವವರು ತಮ್ಮ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರೆ ಉತ್ತಮ . ಇಂತಹ ವೈಯಕ್ತಿಕ ಟೀಕೆಯ ರಾಜಕಾರಣ ಉತ್ತಮವಲ್ಲ ಎಂದು ಕುಮಾರ್ ಬಂಗಾರಪ್ಪ ಎಚ್ಚರಿಸಿದ್ದರು ಅಲ್ಲದೆ, ರಾಧಿಕಾರನ್ನು ಯಾಕೆ ಚುನಾವಣಾ ಪ್ರಚಾರಕ್ಕೆ ಕರೆಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದರು. ಜತೆಗೆ ಕುಮಾರಸ್ವಾಮಿಯವರು ಎಚ್ಚರದಿಂದ ಇರಬೇಕು ಮುಂದಿನ ದಿನಗಳಲ್ಲಿ ಅವರ ವಿರುದ್ಧವೂ ಮೀಟೂ ಬಾಂಬ್ ಸಿಡಿಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿದ್ದರು.
ಕುಮಾರ್ ಬಂಗಾರಪ್ಪ, ಮೀಟೂ ಆರೋಪ ವಿರುದ್ದ ಪ್ರತಿಕ್ರಿಯಿಸಿರುವ, ಸಿಎಂ ನಾನು ಯಾವುದೇ ತಪ್ಪು ಎಸಗಿಲ್ಲ. ಇಂತಹ ವಿಚಾರಗಳನ್ನು ಚುನಾವಣೆ ಸಂದರ್ಭ ಚರ್ಚೆ ಮಾಡುವುದು ಸರಿಯಲ್ಲ. ವೈಯಕ್ತಿಕ ವಿಚಾರ ಚರ್ಚೆ ಮಾಡಲ್ಲ. ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ. ಇಲ್ಲಿ ಕುಮಾರ ಬಂಗಾರಪ್ಪನ ಅಭಿರುಚಿ ಪ್ರದರ್ಶನವಾಗಿದೆ. ಈ ಬಗ್ಗೆ ನಾನು ಹೆಚ್ಚೇನೂ ಮಾತನಾಡಲ್ಲ. ಚುನಾವಣೆ ಸಂದರ್ಭ ಅಭಿವೃದ್ಧಿ ವಿಚಾರ ಚರ್ಚೆ ಮಾಡುವುದು ಉತ್ತಮ. ನಾನು ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದರು.