ಬಂಟ್ವಾಳ, ಅ 30(SM): ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 126 ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆಗೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಕಂದಾಯ ಇಲಾಖೆಯ ಅಧಿಕಾರಿಗಳೇ ರಾಜಕೀಯ ಕಾರಣಕ್ಕೆ ತಡೆ ಹಿಡಿದಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದು, ಬಿ.ಸಿ.ರೋಡಿನಲ್ಲಿರುವ ಮಿನಿವಿಧಾನಸೌಧದಲ್ಲಿರುವ ತಹಶೀಲ್ದಾರ್ ಕೊಠಡಿಯ ಮುಂದೆ ಧರಣಿ ಕುಳಿತ ಪ್ರಸಂಗ ಮಂಗಳವಾರ ಸಂಜೆ ನಡೆದಿದೆ.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸಂಜೀವ ಮಠಂದೂರು ಸಹಿತ ಬಿಜೆಪಿ ಮುಖಂಡರು ಗ್ರಾಮಸ್ಥರ ಪ್ರತಿಭಟನೆಗೆ ಸಾಥ್ ನೀಡಿದ್ದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಮಂಗಳೂರು ಸಹಾಯಕ ಕಮಿಷನರ್ ಅವರನ್ನು ಶಾಸಕರು ತರಾಟೆಗೆ ತೆಗೆದು ಕೊಂಡರು. ಬಳಿಕ ಎಲ್ಲಾ 126 ಫಲಾನುಭವಿಗಳು ಮಿನಿವಿಧಾನಸೌಧದಲ್ಲೇ ಶಾಸಕ ರಾಜೇಶ್ ನಾಯ್ಕ್ ಅವರಿಂದ ಹಕ್ಕುಪತ್ರ ಪಡೆದು ಖುಷಿಪಟ್ಟರು.
ಶಾಸಕರ ಸೂಚನೆಯಂತೆ ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾಮದಲ್ಲಿ 94ಸಿ ಯಡಿ ಹಕ್ಕುಪತ್ರಕ್ಕಾಗಿ ಹಣ ಪಾವತಿಸಿ ಹಲವು ಸಮಯದಿಂದ ಕಾಯುತ್ತಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಸರಪಾಡಿ ಗ್ರಾಪಂ ವಠಾರದಲ್ಲಿ ಮಂಗಳವಾರ ಸಂಜೆಗೆ ನಿಗದಿಯಾಗಿತ್ತು. ಅದರಂತೆ ಸುಮಾರು 126ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ಸಿದ್ದತೆ ನಡೆಸಿತ್ತು.
ಆದರೆ ಕಾರ್ಯಕ್ರಮಕ್ಕೆ 20ರಿಂದ 30 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಉಳಿದವುಗಳನ್ನು ಪ್ರತ್ಯೇಕ ಕಾರ್ಯಕ್ರಮ ನಡೆಸಿ ಕಂದಾಯ ಸಚಿವರ ಮೂಲಕ ವಿತರಿಸಲಾಗುತ್ತದೆ ಎಂದು ಗ್ರಾಮಕರಣಿಕರು ತಿಳಿಸಿದ್ದು, ಸ್ಥಳದಲ್ಲಿ ಗೊಂದಲಕ್ಕೆ ಕಾರಣ ವಾಯಿತು. ಈ ಬಗ್ಗೆ ಸಹಾಯಕ ಕಮಿಷನರ್ ಹಾಗೂ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದಾಗ ಅಸಮಾಧಾನಗೊಂಡ ಶಾಸಕರು ಗ್ರಾಮಕರಣಿಕರನ್ನು ತರಾಟೆಗೆ ತೆಗೆದುಕೊಂಡರೆ, ಗ್ರಾಮಸ್ಥರು ಹಕ್ಕುಪತ್ರ ಕೋಡುವುದಿದ್ದರೆ ೧೨೬ ಮಂದಿಗೂ ಇಲ್ಲೆ ಕೊಡಬೇಕು ಇಲ್ಲದಿದ್ದರೆ ಯಾರಿಗೂ ಕೊಡಬಾರದೆಂದು ಆಕ್ರೋಶ ವ್ಯಕ್ತಪಡಿಸಿದರಿಂದ ಕಾರ್ಯಕ್ರಮ ಅಲ್ಲಿಗೆ ಮೊಟಕುಗೊಂಡಿತಲ್ಲದೆ,ಅಲ್ಲಿ ಸೇರಿದ್ದ ಎಲ್ಲಾ ಫಲಾನುಭವಿಗಳ ಸಹಿತ ಎರಡು ಗ್ರಾಮದ ಗ್ರಾಮಸ್ಥರು ಬಿ.ಸಿ.ರೋಡಿಗೆ ಬಂದು ತಹಶೀಲ್ದಾರರ ಕೊಠಡಿ ಮುಂದೆ ಧರಣಿ ಕುಳಿತರು.
ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡು ಬರುತ್ತಿದ್ದಂತೆ ಕೊನೆಗೂ ಪ್ರತಿಭಟನೆಗೆ ಮಣಿದ ಸಹಾಯಕ ಕಮಿಷನರ್ ಅವರ ಸೂಚನೆಯಂತೆ ಎಲ್ಲಾ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ಸಮ್ಮತಿಸಿದರು. ಬಳಿಕ ಶಾಸಕ ರಾಜೇಶ್ ನಾಯ್ಕ್ ಮಿನಿವಿಧಾನಸೌಧದ ಅವರಣದಲ್ಲಿ ಹಕ್ಕಪತ್ರ ವಿತರಿಸಿದರು.