ಕುಂದಾಪುರ, ಅ, 31 (MSP): ರಾಜ್ಯದ ಮುಖ್ಯಮಂತ್ರಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 13 ಜನ ವಿಧಾನಸಭಾ ಸದಸ್ಯರು, ನಾಲ್ವರು ವಿಧಾನ ಪರಿಷತ್ ಸದಸ್ಯರು ಹಾಗೂ ನಾಲ್ವರು ಮಂತ್ರಿಗಳನ್ನು ಕುಳ್ಳಿರಿಸಿಕೊಂಡು ವಿಧಾನಸೌಧದಲ್ಲಿ ಸಭೆ ನಡೆಸಿ ಅ.15ರೊಳಗೆ ಸಮಸ್ಯೆಯನ್ನು ಬಗೆಹರಿಸಿ ೧೬ರಿಂದ ಎಲ್ಲರಿಗೂ ಮರಳು ದೊರೆಯುವಂತೆ ಮಾಡುವುದಾಗಿ ಭರವಸೆ ನೀಡಿದರೂ ಈವರೆಗೆ ಮರಳು ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಮಾತು ಕೇಳದಿರುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಮೊದಲು ಮರಳು ನೀಡಿ ನಂತರ ಮಾತನಾಡಿ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದರು.
ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ವತಿಯಿಂದ ಮಂಗಳವಾರ ಜರಗಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಾಡದೋಣಿ ಮೀನುಗಾರರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಒಂದು ಲಕ್ಷ ಲೀಟರ್ ಸಬ್ಸಿಡಿ ಸೀಮೆಎಣ್ಣೆ ನೀಡಲಾಗುತ್ತಿತ್ತು. ಈ ಹಿಂದೆ ಪ್ರತಿ ದೋಣಿಗಳಿಗೆ ನೀಡಲಾಗುತ್ತಿದ್ದ 300 ಲೀಟರ್ ಸೀಮೆಎಣ್ಣೆಯನ್ನು ಸರಕಾರ 180 ಲೀಟರ್ಗೆ ಇಳಿಸಿದೆ. ನೂತನ ಸರಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳು ಕಳೆದರೂ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವ ಪರಿಸ್ಥಿತಿ ಸರಕಾರಕ್ಕಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ೫ ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ಮೂರುವರೆ ವರ್ಷಗಳಲ್ಲಿ 17 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹೀಗೆ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರ ಕೈ ಬಲಪಡಿಸಲು, ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಮತ್ತು ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ನಾಯಕರು ಮೀನುಗಾರರಿಗೆ ಧಮ್ಕಿ ಹಾಕಿ ಮತ ಪಡೆಯಲು ಪ್ರಯತ್ನಿಸುತ್ತಿದೆ. ದುಡ್ಡು ಕೊಟ್ಟು ಓಟು ತೆಗೆದುಕೊಳ್ಳುವ ಈ ಎರಡೂ ಪಕ್ಷಗಳ ನಾಯಕರ ಆಟ, ಇಂತಹ ರಾಜಕಾರಣ ಇಲ್ಲಿ ನಡೆಯುದಿಲ್ಲ. ದೇವೇಗೌಡರು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಮುಚ್ಚಲು ೪೮ ಗಂಟೆ ಸಾಕು ಎಂದು ಹೇಳಿಕೆ ನೀಡಿದ್ದು, ದುಡ್ಡಿನ ಶಕ್ತಿ, ತೋಳ್ಬಲ, ಸರಕಾರಿ ಯಂತ್ರದ ದುರುಪಯೋಗದಿಂದ ಇದನ್ನು ಮಾಡುವ ಉದ್ದೇಶವನ್ನಿಟ್ಟುಕೊಂಡು ಇಂತಹ ಹೇಳಿಕೆ ನೀಡಿರಬಹುದು. ಪ್ರಜ್ಞಾವಂತ ಮತದಾರರು ಇರುವ ತನಕ ಇದು ಸಾಧ್ಯವಿಲ್ಲ ಎಂದರು ಹೇಳಿದರು.
ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ಜೀವರಾಜ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಹೆಗ್ಡೆ, ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ನಾರಾಯಣ ಕೆ.ಗುಜ್ಜಾಡಿ, ಸುರೇಂದ್ರ ಖಾರ್ವಿ, ಪಕ್ಷದ ಬೈಂದೂರು ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಯಶಪಾಲ ಸುವರ್ಣ, ಶ್ಯಾಮಲಾ ಕುಂದರ್, ಸಂಧ್ಯಾ ರಮೇಶ್, ಶೇಖರ ದೇವಾಡಿಗ, ಶರತ್ ಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ರಾಘವೇಂದ್ರ ನೆಂಪು ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದೀಪಕಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.