ಮೂಲ್ಕಿ, ಅ 31 (MSP): ಇಲ್ಲಿನ ಬಸ್ ನಿಲ್ದಾಣದ ಸನಿಹದಲ್ಲಿದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಅದರ ಸಮೀಪವೇ ಇರುವ ಪುತ್ರನ್ ನಾಗ ಮೂಲಸ್ಥಾನದಲ್ಲಿ ಮಂಗಳವಾರ ಮುಂಜಾನೆ ದೇವರ ವಿಗ್ರಹ ಹಾಗೂ ಇತರ ವಸ್ತುಗಳ ಕಳ್ಳತನವಾಗಿದ್ದು , ಬಳಿಕ ಅದು ಮೂರೇ ತಾಸಿನಲ್ಲಿ ವಾಪಸ್ ದೊರೆತ ಘಟನೆ ನಡೆದಿದೆ.
ದೇವಸ್ಥಾನ ಗರ್ಭ ಗುಡಿಯ ಬೀಗ ಮುರಿದ ದುಷ್ಕರ್ಮಿಗಳು ಒಳಗಿದ್ದ ಅಯ್ಯಪ್ಪ ಸ್ವಾಮಿಯ ವಿಗ್ರಹ ಅದರೊಂದಿಗೆ ಗಣಪತಿ ಮತ್ತು ಸುಬ್ರಹ್ಮಣ್ಯ ಮೂರ್ತಿಗಳೊಂದಿಗೆ ಬೆಳ್ಳಿ ಬೆತ್ತ, ಹಾಗೂ ಗರ್ಭ ಗುಡಿಯ ಸಮೀಪದಲ್ಲೇ ಇಟ್ಟಿದ್ದ ಗುರುಸ್ವಾಮಿ ಗಿರೀಶ್ ಫಲಿಮಾರು ಎಂಬವರ ಬ್ಯಾಗ್ ಕಳವು ಮಾಡಿದ್ದರು. ಆದರೆ ಈ ಎಲ್ಲಾ ಮೂರ್ತಿಗಳ ಸಹಿತ ಚಿನ್ನ ಬೆಳ್ಳಿಯುಕ್ತ ರುದ್ರಾಕ್ಷಿ ಮಾಲೆ ಕೂಗಳತೆಯ ದೂರದ ಪೊದೆಯಲ್ಲಿ ಪತ್ತೆಯಾಗಿದೆ.
ಈ ಎಲ್ಲಾ ಮೂರ್ತಿಗಳನ್ನು ಪಂಚಲೋಹದಿಂದ ತಯಾರಿಸಲಾಗಿದ್ದು ಸುಮಾರು 2.5 ಲಕ್ಷ ವೆಚ್ಚತಗುಲಿತ್ತು ಎಂದು ದೇಗುಲದ ಪ್ರಮುಖರು ತಿಳಿಸಿದ್ದಾರೆ. ಸಮಿತಿಯ ಅಧ್ಯಕ್ಷ ಗೋಪಿನಾಥ ಪಡಂಗ ಹಾಗೂ ಚುನಾವಣಾ ಪ್ರಚಾರಕ್ಕಾಗಿ ಸಂಚರಿಸುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲು, ಮತ್ತಿತರ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ನಡೆಸಿ ಸೂರ್ಯ ಮುಳುಗುವ ಮೊದಲೇ ಅಯ್ಯಪ್ಪ ವಿಗ್ರಹ ಸಹಿತ ಎಲ್ಲಾ ವಸ್ತುಗಳು ಪತ್ತೆಯಾಗಬೇಕು ಎಂದು ಹೇಳಿಕೊಂಡಿದ್ದರು.
‘ಪೊಲೀಸ್ ಇಲಾಖೆಯ ಶ್ವಾನದಳದ ಮೂಲಕ ತಪಾಸಣೆ ನಡೆಸಿದಾಗ, ಮೂರು ತಾಸಿನ ನಂತರ ವಿಗ್ರಹವಿದ್ದ ಗೋಣಿಚೀಲ ಸುಮಾರು 30 ಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ದೇವಸ್ಥಾನದಿಂದ ಕಳುವಾಗಿದ್ದ ಎಲ್ಲಾ ಮೂರ್ತಿಗಳು, ಸಾಮಗ್ರಿಗಳು ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗೋಣಿಚೀಲದಲ್ಲಿ ಪತ್ತೆಯಾಗಿರುವ ಪಕ್ಕದಲ್ಲಿನ ಮನೆಯೊಂದರಲ್ಲಿ ಸಿಸಿ ಟಿವಿ ಕ್ಯಾಮೆರಾದಲ್ಲಿ ವ್ಯಕ್ತಿಯೊಬ್ಬ ಸಂಚರಿಸುವ ಹಾಗೂ ಅದೇ ಗೋಣಿಚೀಲವನ್ನು ಪೊದೆಗೆ ಎಸೆಯುವ ದೃಶ್ಯ ದಾಖಲಾಗಿದ್ದು ವ್ಯಕ್ತಿಯ ಚಿತ್ರಣ ಸ್ಪಷ್ಟವಾಗಿ ಮೂಡಿಬಂದಿದೆ’ ಎಂಬ ಮಾಹಿತಿ ದೊರಕಿದೆ. ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನು ಬ್ಯಾಗ್ ಮತ್ತು ಕಾಣಿಕೆ ಡಬ್ಬಿ ಸಮೀಪದ ತೋಟದಲ್ಲಿ ಪತ್ತೆಯಾಗಿದೆ. ಕಾಣಿಕೆ ಡಬ್ಬಿಯನ್ನು ಪಿಕ್ಕಾಸಿನಿಂದ ಒಡೆಯಲಾಗಿದ್ದು ಸುಮಾರು ೪೦೦೦ ರೂ. ನಗದು ಕಳವು ಮಾಡಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.