ಬೆಳ್ತಂಗಡಿ, ಅ 31 (MSP): ದಶಕದ ನಂತರ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧಿಕಾರದ ಗದ್ದುಗೆಯನ್ನೇರಲು ಭಾರತೀಯ ಜನತಾ ಪಾರ್ಟಿ ಸಿದ್ಧವಾಗಿದೆ. ಪ.ಪಂ. ವ್ಯಾಪ್ತಿಯ 11 ವಾರ್ಡ್ಗೆ ಅ. 28 ರಂದು ನಡೆದ ಚುನಾವಣೆ ನಡೆದಿತ್ತು. ಬುಧವಾರ ಮತಎಣಿಕೆ ನಡೆದು 7 ವಾರ್ಡ್ಗಳಲ್ಲಿ ಬಿಜೆಪಿ, 7 ವಾರ್ಡ್ಗಳಲ್ಲಿ ಕಾಂಗ್ರೇಸ್ ಜಯಗಳಿಸಿದೆ. ಬಹುಮತ ಪಡೆದಿರುವ ಬಿಜೆಪಿ ಮುಂದಿನ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ.
ಕಳೆದ ಎರಡು ಅವಧಿಗಳಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಪಕ್ಷದ ಒಳಗಿನ ಆಂತರಿಕ ಕಚ್ಚಾಟವನ್ನು ನಿಯಂತ್ರಿಸುವಲ್ಲಿ ವಿಫಲವಾದ ಕಾಂಗ್ರೆಸ್ ಅದಕ್ಕೆ ಚುನಾವಣೆಯಲ್ಲಿ ತಕ್ಕ ಬೆಲೆಯನ್ನು ನೀಡಬೇಕಾಗಿ ಬಂದಿದೆ. ಹಿಂದುಳಿದ ವರ್ಗ ಎ ಮಹಿಳೆ, ಮೀಸಲಾತಿಯಿರುವ 1ನೇ ವಾರ್ಡ್ನಲ್ಲಿ ಕಾಂಗ್ರೆಸ್ನ ರಾಜಶ್ರೀ ವಿ. ರಮಣ್, ಅವರು 244 ಮತಗಳನ್ನು ಗಳಿಸಿ ಬಿಜೆಪಿಯ ಸುಶ್ಮಿತಾ.(162) ಮತಗಳು ಅವರನ್ನು 82 ಮತಗಳ ಅಂತರದಿಂದ ಸೋಲಿಸಿದರು. ಮೂರು ನೋಟ ಮತಗಳು ಚಲಾವಣೆಯಾಗಿದೆ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ 2ನೇ ವಾಡನಲ್ಲಿ ಬಿಜೆಪಿ ಅಭ್ಯರ್ಥಿ ಅಂಬರೀಶ್ 247 ಮತಗಳನ್ನು ಗಳಿಸಿ ಕಾಂಗ್ರೆಸ್ಸಿನ ರಮೇಶ್ (117 ಮತಗಳು) ಅವರನ್ನು 130 ಮತಗಳ ಅಂತರದಿಂದ ಸೋಲಿಸಿದರು. ಇಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಪಕ್ಷದ ತಾಲೂಕು ಅಧ್ಯಕ್ಷ ರಮೇಶ್ ಆರ್ ಅವರಿಗೆ ಕೇವಲ ಎರಡು ಮತಗಳು ಮಾತ್ರ ಲಭಿಸಿದವು.
ಸಾಮಾನ್ಯ ಕ್ಷೇತ್ರವಾಗಿರುವ 3ನೇ ವಾರ್ಡ್ನಲ್ಲಿ ಬಿಜೆಪಿಯ ಶರತ್ ಕುಮಾರ್ಅವರು 232 ಮತಗಳನ್ನು ಪಡೆದು ವಿಜೇರಾಗಿದ್ದಾರೆ. ಕಾಂಗ್ರೆಸ್ನ ಅಭ್ಯರ್ಥಿ ಹೆನ್ರಿ ಲೋಬೋ ಕೇವಲ 90 ಮತಗಳನ್ನು ಪಡೆದು 142 ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ.
ಸಾಮಾನ್ಯ ಮಹಿಳೆ ಮೀಸಲಾತಿಯಿರುವ 4ನೇ ವಾರ್ಡ್ನಲ್ಲಿ ಬಿರುಸಿನ ಸ್ಪರ್ಧೆ ನಡೆದಿದ್ದು ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಮಾಜಿ ಸದಸ್ಯೆ ಮಮತಾ ಶೆಟ್ಟಿ (66ಮತಗಳು) ಅವರನ್ನು ಬಿಜೆಪಿಯ ರಜನಿ ಕುಡ್ವ ಅವರು (169 ಮತಗಳು) 103 ಮತಗಳ ಅಂತರದಿಂದ ಸೋಲಿಸಿ ಗೆಲುವನ್ನು ಪಡೆದಿದ್ದಾರೆ.
ಸಾಮಾನ್ಯಕ್ಷೇತ್ರವಾಗಿರುವ 5 ನೇ ವಾರ್ಡ್ನಲ್ಲಿ ಕಾಂಗ್ರೆಸ್ನ ಜನಾರ್ದನಕುಂಬಾರ, ಅವರು 207 ಮತಗಳನ್ನು ಪಡೆದು ಬಿಜೆಪಿಯ ಗಣೇಶ್ (200 ಮತಗಳು) ಅವರನ್ನು ಏಳು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಾಮಾನ್ಯ ಮಹಿಳೆ ಮೀಸಲಾತಿಯಿರುವ 6ನೇ ವಾರ್ಡ್ನಲ್ಲಿ ಕಾಂಗ್ರೆಸ್ ನಿಂದ ಮಾಜಿ ಸದಸ್ಯೆ ಮುಸಾ಼ರ್ಜಾನು ಮೆಹಬೂಬ್, ಅವರು 135 ಮತಗಳನ್ನು ಪಡೆದು ಆರು ಮತಗಳ ಅಂತರದಿಂದ ವಿಜೇತರಾಗಿದ್ದಾರೆ. ಇಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿ ನಸೀಮಾ ಸಂಜಯನಗರ 129 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯಿಂದ ರಾಧಿಕಾ, ಅವರಿಗೆ 117 ಮತಗಳು ದೊರೆತಿದ್ದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.
ಪರಿಶಿಷ್ಟ ಪಂಗಡ ಮೀಸಲಾತಿಯಿರುವ ೭ನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ 364 ಮತಗಳನ್ನು ಗಳಿಸಿ ಕಾಂಗ್ರೆಸ್ನ ಸತೀಶ ನಾಯ್ಕ (145ಮತಗಳು) ಅವರನ್ನು 219 ಮತಗಳ ಅಂತರದಿಂದ ಸೋಲಿಸಿದರು.
ಹಿಂದುಳಿದ ವರ್ಗ (ಎ,)ಮೀಸಲಾತಿಯಿರುವ ೮ನೇ ವಾರ್ಡ್ನಲ್ಲಿ ಕಾಂಗ್ರೆಸ್ನ ಮಾಜಿ ಸದಸ್ಯ ಜಗದೀಶ ಡಿ. ಅವರು 379 ಮತಗಳನ್ನು ಪಡೆದು 202 ಮತಗಳ ಅಂತರದಿಂದ ವಿಜೇತರಾಗಿದ್ದಾರೆ. ಬಿಜೆಪಿಯಿಂದ ಶಂಕರ ಹೆಗ್ಡೆ, ಅವರಿಗೆ 177 ಮತಗಳು ಮಾತ್ರ ಲಭಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಜನಾರ್ಧನ ಬಂಗೇರ ಅವರಿಗೆ ಕೇವಲ ಎಂಟು ಮತಗಳು ಮಾತ್ರ ಲಭಿಸಿದೆ.
ಸಾಮಾನ್ಯ ಮಹಿಳೆ ಮೀಸಲಾತಿಯಿರುವ 9ನೇ ವಾರ್ಡ್ನಲ್ಲಿ ಬಿಜೆಪಿಯ ತುಳಸಿ 245 ಮತಗಳನ್ನು ಪಡೆದು ಕಾಂಗ್ರೆಸ್ಸಿನ ಪ್ರೇಮದೇವಾಡಿಗ ( 174 ಮತಗಳು) ಅವರನ್ನು 71 ಮತಗಳ ಅಂತರದಿಂದ ಸೋಲಿಸಿ ಗೆಲುವನ್ನು ಕಂಡಿದ್ದಾರೆ. ಜಾತ್ಯಾತೀತ ಜನತಾದಳದ ಅಭ್ಯರ್ಥಿ ಅನಿತಾ ಅವರಿಗೆ 88 ಮತಗಳು ಲಭಿಸಿದೆ.
ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯಿರುವ 10ನೇ ವಾರ್ಡ್ ಬಿಜೆಪಿಯಗೌರಿ 271 ಮತಗಳನ್ನು ಗಳಿಸಿ162 ಮತಗಳ ಅಂತರದಿಂದ ಗೆಲುವನ್ನು ಕಂಡಿದ್ದಾರೆ. ಇಲ್ಲಿ ಬಿ.ಎಸ್.ಪಿ ಯ ಅಭ್ಯರ್ಥಿ ಪ್ರೇಮ (108 ಮತಗಳು) ಸೋಲನ್ನು ಕಂಡಿದ್ದಾರೆ. ಇಲ್ಲಿ ಕಾಂಗ್ರೆಸ್ನ ಲತಾ ಕೆ. ಅವರಿಗೆ 81 ಮತಗಳು ಮಾತ್ರ ಲಭಿಸಿದ್ದು ಮೂರನೇ ಸ್ಥಾನಕ್ಕೆ ಇಳಿದಿದೆ.
ಸಾಮಾನ್ಯ ಕ್ಷೇತ್ರವಾಗಿರುವ 11ನೇ ವಾರ್ಡ್ನಲ್ಲಿ ಕಾಂಗ್ರೆಸ್ ತೊರೆದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಪಟ್ಟಣ ಪಂಚಾಯತಿನ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣರಾವ್ 143 ಮತಗಳನ್ನು ಗಳಿಸಿ ಸೋಲನ್ನು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜಯಾನಂದಗೌಡ ಅವರು 205 ಮತಗಳನ್ನು ಗಳಿಸಿ 62 ಮತಗಳ ಅಂತರದಿಂದ ಗೆಲುವನ್ನು ಕಂಡಿದ್ದಾರೆ. ಕಾಂಗ್ರೆಸ್ಸಿನ ಸತೀಶ್ 105 ಮತಗಳನ್ನು ಗಳಿಸಿ ತೃತೀಯ ಸ್ಥಾನಿಯಾದರು.