ಮಂಗಳೂರು, ಅ 31(SM): ಕೋಕೇನ್ ಮಾರಾಟ ಜಾಲದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಜ್ಮಲ್ ಪುಲಿಕ್ಕಲ್ ಎಂದು ಗುರುತಿಸಲಾಗಿದೆ. ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ಕೋಕೆನ್ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಈತ ಗೋವಾದಿಂದ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮರೋಳಿ ಬಳಿಯಿಂದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ೭೦ ಸಾವಿರ ಮೌಲ್ಯದ ಮಾದಕ ವಸ್ತು, ೩ ಕಾರುಗಳು, ನಗದು, ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂದಿದ್ದರು.
ಅವರ ಮೂಲಕ ಪ್ರಮುಖ ಆರೋಪಿ ಅಜ್ಮಲ್ ಬಗ್ಗೆ ಮಾಹಿತಿ ಪಡೆದ ತಂಡ ಇಂದು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಈತನ ವಿರುದ್ಧ ನಕಲಿ ಪಾಸ್ ಪೋರ್ಟ್ ಹೊಂದಿದ ಬಗ್ಗೆ 2008ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಮಂಗಳೂರು ನಗರ ಠಾಣಾ ಪೊಲೀಸರಿಗೆ ಒಪ್ಪಿಸಲಾಗಿದೆ.