ಮಂಗಳೂರು,ನ 01 (MSP):ಕುದ್ರೋಳಿ ಕಸಾಯಿಖಾನೆಗೆ ಸಂಬಂಧಿಸಿದಂತೆ ಆದಳಿತ ಮತ್ತು ಪ್ರತಿಪಕ್ಷಗಳ ನಡುವೆ ಉಂಟಾದ ಸುದೀರ್ಘ ವಾಗ್ವಾದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆಹುತಿ ಪಡೆಯಿತು. ಪಾಲಿಕೆ ಮಂಗಳಾ ಸಭಾಂಗಣದಲ್ಲಿ ಬುಧವಾರ ಮೇಯರ್ ಕೆ. ಬಾಸ್ಕರ್ ಮೊಯ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾರು ಒಂದೂವರೆ ತಾಸುಗಳ ಕಾಲ ಕಸಾಯಿಖಾನೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ವಿಷಯ ಪ್ರಸ್ತಾಪಿಸಿದರು. ಕುದ್ರೋಳಿಯಲ್ಲಿ ಕೇವಲ 40 ಸೆಂಟ್ಸ್ ವಿಸ್ತೀರ್ಣದಲ್ಲಿ ಕಸಾಯಿಖಾನೆ ಇದೆ. ಕಸಾಯಿಖಾನೆ ನಗರ ಪ್ರದೇಶದಿಂದ ಹೊರಪ್ರದೇಶದಲ್ಲಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಪರವಾನಗಿ ನವೀಕರಿಸಿಲ್ಲ. ಅನಧಿಕೃತವಾಗಿ ನಡೆಯುತ್ತಿರುವ ಕಸಾಯಿಖಾನೆಯನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸಬೇಕು. ಸಚಿವ ಯು.ಟಿ.ಖಾದರ್ ಹಸ್ತಕ್ಷೇಪ ಮಾಡಬಾರದು ಎಂದರು. ಇದಲ್ಲದೆ ಪಾಲಿಕೆ ಆಯುಕ್ತರು ಸಚಿವರ ಪತ್ರವನ್ನು ನೇರವಾಗಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಿರುವುದು ತಪ್ಪು. ಮೊದಲಿನಿಂದಲೂ ನಾನು ಅದನ್ನು ವಿರೋಧಿಸಿದ್ದೇನೆ. ಆ ಪ್ರಸ್ತಾವವನ್ನು ಹಿಂದಕ್ಕೆ ಪಡೆದು ಪಾಲಿಕೆ ಸಭೆಯ ಮುಂದಿಡಬೇಕು’ ಎಂದು ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು. ಬಿಜೆಪಿಯ ರೂಪಾ ಡಿ. ಬಂಗೇರ, ಗಣೇಶ್ ಹೊಸಬೆಟ್ಟು, ರಾಜೇಶ್ ಸೇರಿದಂತೆ ಹಲವರು ಪಾಲಿಕೆ ಆಡಳಿತದ ವಿರುದ್ಧ ಹರಿಹಾಯ್ದರು.
ಈ ವೇಳೆ ಕಸಾಯಿಖಾನೆ ಆಧುನೀಕರಣ ಪ್ರಸ್ತಾವ ಸಮರ್ಥಿಸಿಕೊಂಡ ಕಾಂಗ್ರೆಸ್ನ ಸದಸ್ಯ ದೀಪಕ್ ಪೂಜಾರಿ, ಕುದ್ರೋಳಿ ಕಸಾಯಿಖಾನೆಯಲ್ಲಿ ನಿತ್ಯವೂ ಐದು ಟ್ಯಾಂಕರ್ನಷ್ಟು ರಕ್ತಮಿಶ್ರಿತ ನೀರು ಸಂಗ್ರಹವಾಗುತ್ತಿದೆ. ಅದನ್ನು ಮುಲ್ಲಕಾಡು ಬಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಬಿಡಲಾಗುತ್ತಿದೆ. ಪರಿಣಾಮವಾಗಿ ಸಂಸ್ಕರಿಸಿದ ನೀರಿನ ಗುಣಮಟ್ಟ ಉತ್ತಮವಾಗಿಲ್ಲ. ಆ ನೀರನ್ನು ಪಡೆಯಲು ವಿಶೇಷ ಆರ್ಥಿಕ ವಲಯದ ಆಡಳಿತ ನಿರಾಕರಿಸುತ್ತಿದೆ. ಈ ಎಲ್ಲಾ ತೊಂದರೆಗಳಿಂದ ಕಸಾಯಿಖಾನೆ ಅಭಿವೃದ್ದಿಪಡಿಸಲೇಬೇಕು ಎಂದು ಒತ್ತಾಯಿಸಿದರು.
ಬಳಿಕ ಕಾಂಗ್ರೆಸ್ನ ಮಹಾಬಲ ಮಾರ್ಲ ಮಾತನಾಡಿ , ಕಸಾಯಿಖಾನೆ ಸ್ಥಳಾಂತರಕ್ಕೆ ಹಿಂದೆ ಕಣ್ಣೂರಿನಲ್ಲಿ 26 ಎಕರೆ ಜಮೀನು ಗುರುತಿಸಲಾಗಿತ್ತು. ನಂತರ ಪಚ್ಚನಾಡಿ ಪ್ರದೇಶಕ್ಕೆ ಸ್ಥಳಾಂತರಿಸಲು ಯೋಜಿಸಲಾಗಿತ್ತು. ಆದರೆ ಸ್ಥಳಾಂತರ ಪ್ರಕ್ರಿಯೆ ಸುಲಭವಲ್ಲ ಹೀಗಾಗಿ ಅಭಿವೃದ್ದಿ ಆಗಲೇಬೇಕು’ ಎಂದು ಕಾಂಗ್ರೆಸ್ನ ಮಹಾಬಲ ಮಾರ್ಲ ಹೇಳಿದರು. ಕಾಂಗ್ರೆಸ್ನ ಕವಿತಾ ಅನಿಲ್, ಜೆಡಿಎಸ್ನ ಅಬ್ದುಲ್ ಅಝೀಝ್ ಸೇರಿದಂತೆ ಹಲವರು ದ್ವನಿಗೂಡಿಸಿದರು.
ನಂತರ ಉತ್ತರ ನೀಡಿದ ಆಯುಕ್ತ ಮೊಹಮ್ಮದ್ ನಝೀರ್, ‘ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ನಡೆದ ಸಭೆಯಲ್ಲಿ ಕಸಾಯಿಖಾನೆ ಸೇರಿದಂತೆ ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.ಅದರಂತೆ ನಡೆದುಕೊಳ್ಳಬೇಕಾಗುತ್ತದೆ.ಇಲ್ಲಿ ಚರ್ಚೆ ನಡೆಸುವುದು ವ್ಯರ್ಥ ಎಂದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಕೊನೆಗೆ ಪಕ್ಷಗಳ ಮದ್ಯೆ ವಾದ-ಪ್ರತಿವಾದ ನಡೆದು ಕೊನೆಗೆ ಯಾವುದೇ ಇತ್ಯರ್ಥಕ್ಕೆ ಬರದೆ ಚರ್ಚೆಯಲ್ಲೇ ಕೊನೆಗೊಂಡಿತು.