ಕುಂದಾಪುರ, ನ 01 (MSP): ದೇಶದಲ್ಲಿಯೇ ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವ ಕರ್ನಾಟಕ ರಾಜ್ಯೋತ್ಸವವು ಕನ್ನಡಿಗರು ಭಾವಾಭಿಮಾನ ಮೆರೆದ ದಿನ. ದೇಶದ ಸ್ವಾತಂತ್ರ್ಯ ಹಾಗೂ ಕರುನಾಡಿನ ಏಕೀಕರಣಕ್ಕೆ ಸ್ಮರಿಸಿದ ಮಹನೀಯರ ಸ್ಮರಣೆ ಮಾಡುವ ದಿನವಿದು ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಹೇಳಿದರು. ಅವರು ಗುರುವಾರ ಕುಂದಾಪುರದ ಗಾಂಧಿ ಮೈದಾನದಲ್ಲಿ ಕುಂದಾಪುರ ತಾಲೂಕು ಆಡಳಿತದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ, ನಾಡಧ್ವಜಾರೋಹಣಗೈದು ಶುಭ ಸಂದೇಶ ನೀಡಿದರು.
ಆಲೂರು ವೆಂಕಟರಾವ್, ಕೆಂಗಲ್ ಹನುಮಂತಯ್ಯ, ಕುವೆಂಪು, ಅವಿಭಜಿತ ದ.ಕ. ಜಿಲ್ಲೆಯ ಕಾರ್ನಾಡ್ ಸದಾಶಿವ ರಾವ್, ಗೋವಿಂದ ಪೈ, ಶಿವರಾಮ ಕಾರಂತ ಅವರಂತಹ ಮಹನೀಯರು ಕನ್ನಡದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ಅವರ ಸಾಧನೆ, ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸೋಣ ಎಂದವರು ಹೇಳಿದರು.
ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ, ಅಧಿಕಾರಿಗಳಾದ ರಾಘವೇಂದ್ರ ವರ್ಣೇಕರ್, ಕುಸುಮಾಕರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಗಂಗೊಳ್ಳಿ ಹಾಗೂ ತಂಡ, ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ಮನರಂಜಿಸಿತು.
ಆಕರ್ಷಕ ಪಥಸಂಚಲನ
ಧ್ವಜಾರೋಹಣದ ಬಳಿಕ ಕುಂದಾಪುರ ಪೊಲೀಸ್ ತಂಡ, ಗೃಹರಕ್ಷಕ ದಳ, ಎನ್ಸಿಸಿ ವಿಭಾಗದಲ್ಲಿ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆ, ವೆಂಕಟರಮಣ ಆ.ಮಾ. ಶಾಲೆ, ಸೈಂಟ್ ಮೇರಿಸ್ ಪ್ರೌಢಶಾಲೆ, ಸ್ಕೌಟ್ಸ್ನಲ್ಲಿ ಶಾಸಕರ ಮಾದರಿ ಹಿ.ಪ್ರಾ. ಶಾಲೆ ಕುಂದಾಪುರ, ಬಿ.ಆರ್. ರಾಯರ ಶಾಲೆ, ವೆಂಕಟರಮಣ ಆ.ಮಾ.ಶಾಲೆ, ಹೋಲಿ ರೋಜರಿ ಆ.ಮಾ. ಶಾಲೆ, ವಿ.ಕೆ.ಆರ್. ಆಚಾರ್ಯ ಶಾಲೆ, ಗೈಡ್ಸ್ನಲ್ಲಿ ಸೈಂಟ್ ಮೇರಿಸ್, ವೆಂಕಟರಮಣ ಆ.ಮಾ. ಶಾಲೆ, ವಡೇರಹೋಬಳಿ ಹಿ.ಪ್ರಾ. ಶಾಲೆ, ಎಚ್.ಎಂ.ಎಂ., ಹೋಲಿ ರೋಜರಿ ಶಾಲೆ, ಸೈಂಟ್ ಜೋಸೆಫ್ ಆ.ಮಾ. ಶಾಲೆ, ಸೇವಾದಳದಲ್ಲಿ ಮಾದರಿ ಹಿ.ಪ್ರಾ. ಶಾಲೆ ವಡೇರಹೋಬಳಿ, ಬಿ.ಆರ್. ರಾಯರ ಶಾಲೆ, ಬೋರ್ಡ್ ಹೈಸ್ಕೂಲ್ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ಇವರಿಗೆ ಬ್ಯಾಂಡ್ ಸೆಟ್ನಲ್ಲಿ ಸೈಂಟ್ ಜೋಸೆಫ್ ಆ.ಮಾ. ಶಾಲೆಯ ತಂಡ ಸಹಕರಿಸಿತು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಶೇ.100 ಕನ್ನಡ ಬಳಕೆಗೆ ಪ್ರಯತ್ನ
ಕನ್ನಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ಸರಕಾರಿ ಇಲಾಖೆಗಳಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಬಳಸುವ ಕುರಿತಂತೆ ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿದೆ. ಭಾವೈಕ್ಯತೆ, ನಾಡು ಹಾಗೂ ದೇಶ ಪ್ರೇಮದೊಂದಿಗೆ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ.
- ಟಿ. ಭೂಬಾಲನ್, ಸಹಾಯಕ ಆಯುಕ್ತರು, ಕುಂದಾಪುರ ಉಪವಿಭಾಗ