ರಾಮನಗರ, ನ 01(SM): ನವೆಂಬರ್ 3ರಂದು ಉಪಚುನಾವಣೆ ನಡೆಯಲಿದ್ದು, ದಿನವೊಂದು ಬಾಕಿ ಇರುವಾಗಲೇ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಅಘಾತ ಉಂಟಾಗಿದೆ.
ರಾಮನಗರದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಮರಳಿ ಸೇರ್ಪಡೆಗೊಂಡು ಬಿಜೆಪಿ ಪಕ್ಷ ಭಾರಿ ಮುಖಭಂಗ ಉಂಟಾಗಿದೆ. ಈ ಮೂಲಕ ಉಪ ಚುನಾವಣೆಗೆ ಭಾರಿ ಟ್ವಿಸ್ಟ್ ಸಿಕ್ಕಂತಾಗಿದೆ.
ರಾಮನಗರದಲ್ಲಿ ಜೆಡಿಎಸ್ಗೆ ಬೆಂಬಲ ನೀಡುವ ಕಾಂಗ್ರೆಸ್ ತೀರ್ಮಾನವನ್ನು ವಿರೋಧಿಸಿ ತಿಂಗಳ ಹಿಂದೆಯಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದರು. ಬಿಜೆಪಿಗೆ ಪ್ರಭಾವಿ ನಾಯಕರು ರಾಮನಗರ ಕ್ಷೇತ್ರದಲ್ಲಿಲ್ಲದ ಕಾರಣ ಹಾಗೂ ಕಾಂಗ್ರೆಸ್ ನಿಂದ ಬಂದಂತಹ ಅಭ್ಯರ್ಥಿಗೆ ಅಲ್ಲಿನ ಮತಗಳನ್ನು ಕಸಿಯುವ ಸಾಮಾರ್ಥ್ಯ ಇರುವ ಕಾರಣ ಚಂದ್ರಶೇಖರ್ ಗೆ ಬಿಜೆಪಿ ಟಿಕೆಟ್ ನೀಡಿತ್ತು. ಅಲ್ಲದೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಗೆ ಮುಖಭಂಗವನ್ನುಂಟು ಮಾಡಲು ಬಿಜೆಪಿ ಯತ್ನಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಚಂದ್ರಶೇಖರ್ ಬಿಜೆಪಿಗೂ ಕೈಕೊಟ್ಟಿದ್ದಾರೆ. ಮರಳಿ ಕಾಂಗ್ರೆಸ್ ನ ಕೈಹಿಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್, ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದಾರೆ. ನಾನು ಮೂಲತಃ ಕಾಂಗ್ರೆಸ್ಸಿಗ. ಬಿಜೆಪಿಯಿಂದ ಟಿಕೆಟ್ ಕೊಟ್ಟರು, ಕೈಯಲ್ಲಿ ಬಾವುಟ ಇಟ್ಟರು, ಆದರೆ ಯಾರೂ ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ಹೀಗಾಗಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ಮರಳಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಇದಕ್ಕೆಲ್ಲ ಸಿಪಿ ಯೋಗೇಶ್ವರ್ ಕಾರಣ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಬಿಜೆಪಿಯ ಸಹವಾಸವೇ ಬೇಡ ಎಂದು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದರು.
ಇನ್ನು ಬಿಜೆಪಿಯಲ್ಲಿ ಒಬ್ಬರನ್ನೊಬ್ಬರಿಗೆ ಕಂಡರೆ ಆಗುವುದಿಲ್ಲ. ಬಿಜೆಪಿಯಿಂದ ಟಿಕೆಟ್ ಕೊಟ್ರು, ಕೈಯಲ್ಲಿ ಬಾವುಟ ಇಟ್ಟರು. ಸಿಪಿ ಯೋಗೇಶ್ವರ್ ಕರೆದುಕೊಂಡು ಬಂದರು. ಆದರೆ ನನ್ನ ಪರವಾಗಿ ಯಡಿಯೂರಪ್ಪ ಪ್ರಚಾರಕ್ಕೆ ಬರಲೇ ಇಲ್ಲ. ಬಿಜೆಪಿಯಲ್ಲಿ ಒಬ್ಬರನ್ನೊಬ್ಬರಿಗೆ ಕಂಡರೆ ಆಗುವುದಿಲ್ಲ. ಅವರಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಯಾರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಎಲ್ಲ ಮುಖಂಡರೂ ಶಿವಮೊಗ್ಗ, ಬಳ್ಳಾರಿ, ಮಂಡ್ಯಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.