ಬಳ್ಳಾರಿ, ನ 01(SM): ನಾನು 420 ಅಲ್ಲ, ನನ್ನನ್ನು ಎಲ್ಲರೂ 108 ಆಂಬುಲೆನ್ಸ್ ಎನ್ನುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂಗೆ ಬಿಜೆಪಿ ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲುವ ಭೀತಿಯಿಂದ ಸಿದ್ದರಾಮಯ್ಯನವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಸಿದ್ದರಾಮಯ್ಯನಷ್ಟು ಜಾಣನಲ್ಲ. ಆದರೆ ನಾನು ದಡ್ಡನಂತೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ನನ್ನನ್ನು ಅಪಮಾನ ಮಾಡುತ್ತಿಲ್ಲ. ಬದಲಾಗಿ ಈ ಭಾಗದ ಜನರ ಭಾಷೆಯ ಸೊಗಡನ್ನು ಅಪಮಾನ ಮಾಡುತ್ತಿದ್ದಾರೆ. ನನಗೆ 420 ಶ್ರೀರಾಮುಲು ಅಂತಾ ಹೇಳಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಎಲ್ಲರೂ ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾ ಕರೆಯುತ್ತಾರೆ ಎನ್ನುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಅಧಿಕಾರದ ಆಸೆಯಿಂದಾಗಿ ದುರುಪಯೋಗ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ರಾಮನಗರ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ವಾಲ್ಮೀಕಿ ಜಯಂತಿಗೆ ಸಮ್ಮಿಶ್ರ ಸರ್ಕಾರ ಅಪಮಾನ ಮಾಡಿದೆ. ಮಾಜಿ ಪ್ರಧಾನಿ ದೇವೇಗೌಡರು ವಾಲ್ಮೀಕಿ ಜಯಂತಿಯಂದು ಪ್ರಶಸ್ತಿ ಸ್ವೀಕರಿಸಿಲ್ಲ. ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ.ಪರಮೇಶ್ವರ್ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ನಮ್ಮ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.