ನವದೆಹಲಿ,ನ 02 (MSP): ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ನಟಿ ರಮ್ಯಾ ಅವರು ನ 01ರ ಗುರುವಾರ ಮತ್ತೆ ವಿವಾದಾತ್ಮಕ ಟ್ಟೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ಗುರುವಾರದಂದು ವಿಶ್ವದ ಅತಿ ಎತ್ತರದ ಪ್ರತಿಮೆ 'ಏಕತಾ ಮೂರ್ತಿ' ಯನ್ನು ಅನಾವರಣಗೊಳಿಸಿದ್ದರು. ಬಳಿಕ ಪಟೇಲರ ಪ್ರತಿಮೆ ಬಳಿ ತೆರಳಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. ಬೃಹತ್ ಮೂರ್ತಿ ಮುಂದೆ ಮೋದಿ ಕೆಳಗೆ ಪುಟ್ಟದಾಗಿ ಕಾಣಿಸುತ್ತಿದ್ದರು. ಆ ಚಿತ್ರವನ್ನು ಟ್ಟೀಟ್ ಮಾಡಿರುವ ಮಾಜಿ ಸಂಸದೆ ರಮ್ಯಾ, ಏಕತಾ ಮೂರ್ತಿ ಯ ಪಾದದ ಬಳಿ ಇರುವುದು ಹಕ್ಕಿಯ ಹಿಕ್ಕೆನಾ..? ಎಂದು ಅಡಿಬರಹ ನೀಡಿ ಟ್ವೀಟ್ ಮಾಡಿದ್ದರು.
ಆದರೆ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಜಾಲತಾಣಿಗರು ದೇಶದ ಪ್ರಧಾನಿಯನ್ನ ರಮ್ಯಾ ಮತ್ತೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಬಿಜೆಪಿ ಕೂಡಾ ರಮ್ಯಾ ಅವರ ಟ್ವೀಟ್ ನ್ನು ಖಂಡಿಸಿದ್ದು, ಇದು ಕಾಂಗ್ರೆಸ್ ನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದಿದೆ.
ನೆಟ್ಟಿಗರು , ಮೋದಿಗೆ ಯಾಕೆ ಪದೇ ಪದೇ ಅವಮಾನ ಮಾಡುತ್ತಿದ್ದೀರಾ? ಈ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಒತ್ತಾಯಿಸಿದರೆ, ವರಸೆ ಬದಲಾಯಿಸಿಕೊಳ್ಳದ ರಮ್ಯಾ ನೀವು ಎಷ್ಟೇ ಕೂಗಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಸ್ಪಷ್ಟೀಕರಣವನ್ನು ನೀಡುವುದಿಲ್ಲ ಎಂದಿದ್ದಾರೆ