ಉಡುಪಿ, ನ 02 (MSP): ಧರ್ಮ ಮತ್ತು ಸಂಪ್ರದಾಯದ ಪರಿವರ್ತನೆ ಮಾಡುವುದು ಸುಪ್ರೀಂ ಕೋರ್ಟ್ ನ ಕೆಲಸವಲ್ಲ. ಹಾಗೆಯೇ ಧರ್ಮದ ಕುರಿತು ನಿರ್ಣಯ ಮಾಡುವುದು ಸರ್ಕಾರದ ಕಾರ್ಯವಲ್ಲ. ಸಂಪ್ರದಾಯ ಬದಲಾವಣೆ ಮಾಡುವುದು ಸಂತರು ಮತ್ತು ಭಕ್ತರ ಜವಾಬ್ದಾರಿ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಧರ್ಮ ಟ್ರಸ್ಟ್ ವತಿಯಿಂದ ಕೇರಳ ರಾಜ್ಯದ ಪಂದಳ ಪ್ಯಾಲೇಸ್ ಟ್ರಸ್ಟ್ ಅಧ್ಯಕ್ಷ ಶಶಿಕುಮಾರ್ ವರ್ಮ ಅವರ ನೇತೃತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಅಯ್ಯಪ್ಪ ಸ್ವಾಮಿಯ ಮಹಾಸಹಸ್ರಾರ್ಚನೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಹಿಂದೂ ಸಂಘಟನೆಯ ಕೇಂದ್ರಬಿಂದು ಶಬರಿಮಲೆ. ಧಾರ್ಮಿಕ ನಿಯಮದ ಶಿಸ್ತು ಬೆಳೆಸಿದ ಕೀರ್ತಿಯೂ ಶಬರಿಮಲೆಗಿದೆ. ಆದರೆ ಶಬರಿಮಲೆಗೆ ಮಹಿಳಾ ಪ್ರವೇಶದ ವಿಚಾರದಲ್ಲಿ ಕೋರ್ಟ್ ನೀಡದ ಆದೇಶ ಹಿಂದೂ ಧರ್ಮಕ್ಕೆ ಆತಂಕ ತಂದಿದೆ. ಹಾಗಾಗಿ ಅಯ್ಯಪ್ಪ ದೇವಸ್ಥಾನದ ತೀರ್ಪು ಪುನರ್ ವಿಮರ್ಶೆ ಆಗಬೇಕು ಎಂದು ಒತ್ತಾಯಿಸಿದರು.
ಹಿಂದೂ ಸಮಾಜದ ಬೆಂಬಲ ಇದ್ದರೆ ಮಾತ್ರ ಸಂಪ್ರದಾಯದಲ್ಲಿ ಪರಿವರ್ತನೆ ಆಗಬೇಕು. ಈ ವಿಚಾರದಲ್ಲಿ ಭಕ್ತರ, ಮಹಿಳೆಯರ ಅಭಿಪ್ರಾಯವೇ ಅಂತಿಮ. ಹಿಂದೂ ಧರ್ಮ ಯಾವತ್ತೂ ಮಹಿಳೆಯರಿಗೆ ಅವಮಾನ ಮಾಡಿಲ್ಲ ಎಂದರು.
ಕೇರಳ ಸರ್ಕಾರ ಶೃದ್ಧಾಳುಗಳಿಗೆ ದೌರ್ಜನ್ಯ ಮಾಡುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ನಾನು ಯಾವತ್ತೂ ಸಂಪ್ರದಾಯ ಬದಲಾವಣೆಯ ಪರವಾಗಿದ್ದೇನೆ. ದಲಿತರ ವಿಚಾರದಲ್ಲಿ ನಾನು ಸಂಪ್ರದಾಯ ಬದಲಾಯಿಸಿದ್ದರಲ್ಲಿ ಮೊದಲಿಗ. ರಾಮ ಮಂದಿರಕ್ಕೆ ವಿರುದ್ಧ ತೀರ್ಪು ಬಂದರೂ ವಿರೋಧಿಸುತ್ತೇನೆ. ರಾಮಮಂದಿರ ವಿಚಾರದಲ್ಲೂ ಸಂತರು, ಭಕ್ತರ ತೀರ್ಮಾನವೇ ಅಂತಿಮ. ಹಿಂದೂಗಳ ಒಪ್ಪಿಗೆ ಇದ್ದರೆ ಮಾತ್ರ ಸಂಪ್ರದಾಯ ಬದಲಾಯಿಸಬೇಕು ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.