ಬಾಗಲಕೋಟೆ,ನ 02 (MSP): ರಫೇಲ್ ಡೀಲ್ ಗೆ ಸಂಬಂಧಿಸಿದ ಅವ್ಯವಹಾರದ ಸತ್ಯಾಂಶ ಶೀಘ್ರದಲ್ಲೇ ಹೊರಬೀಳಲಿದೆ, ಇದರ ಪರಿಣಾಮ ಪ್ರಧಾನಿ ನರೇಂದ್ರ ಮೋದಿಯವರು ಜೈಲಿಗೆ ಹೋಗುವುದು ಖಂಡಿತಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಗುಡುಗಿದ್ದಾರೆ.
ಅವರು ಬಾಗಲಕೋಟೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ನ.3 ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರ ಪರ ಪ್ರಚಾರ ಭಾಗವಹಿಸಿ ಬಿಜೆಪಿ ಪಕ್ಷದ ಮೇಲೆ ಹರಿಹಾಯ್ದು ಪ್ರಧಾನಿ ಮೋದಿ ಅವರ ಮೇಲೆ ವಾಗ್ದಳಿ ನಡೆಸಿದರು.
ರಫೇಲ್ ಡೀಲ್ ನಲ್ಲಿ ನಡೆದ ಅವ್ಯವಹಾರದ ಬಹಿರಂಗವಾದರೆ ಮೋದಿ ಜೈಲಿಗೆ ಹೋಗುವುದು ಶತಸಿದ್ದ. ಹೇಗೆ ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋಗಿದ್ದಾರೆ ಹಾಗೆಯೇ, ಪ್ರಧಾನಿ ಮೋದಿಯೂ ಕೂಡಾ ಕಂಬಿ ಎಣಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.ದೇಶದಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ.. ಬಿಜೆಪಿ ಗೆ ಮಾತನಾಡಲು ಯಾವುದೇ ಅಭಿವೃದ್ದಿ ಕಾರ್ಯಗಳಿಲ್ಲ..ಹೀಗಾಗಿಯೇ ರಾಮ ಮಂದಿರದ ವಿಷಯವನ್ನು ಮತ್ತೆ ಮತ್ತೆ ಕೆದಕಿ ಅದನ್ನೇ ಮುಂದಿಟ್ಟುಕೊಂಡು ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಮತಕ್ಕಾಗಿ ಕೋಮು ರಾಜಕೀಯದ ಮೂಲಕ ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿರುವ ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರವಿಡಿ’ ಎಂದು ಅವರು ಕರೆ ನೀಡಿದರು.