ಉಡುಪಿ,ನ 02 (MSP): ಉಡುಪಿಯ ರೈಲ್ವೇ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 1.65 ಕೋಟಿ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಉಪ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಹಣ ಸಾಗಾಟ ಪತ್ತೆಯಾಗಿದ್ದು, ಹಲವು ಸಂಶಯಕ್ಕೆ ಎಡೆಮಾಡಿದೆ. ಪೊಲೀಸರು ಮೂವರು ಆರೋಪಿಗಳನ್ನು ಶುಕ್ರವಾರ ಮುಂಜಾನೆ ಬಂಧಿಸಿ, ಅವರಿಂದ ನಗದು ಸ್ವಾಧೀನಕ್ಕೆ ಪಡೆದಿದ್ದಾರೆ. ಮುಂಬೈಯಿಂದ ಕೇರಳಕ್ಕೆ ಹೋಗುವ 16345 ನೇತ್ರಾವತಿ ಎಕ್ಸ್ಪ್ರೆಸ್ನಲ್ಲಿ ರೈಲಿನಲ್ಲಿ ಹಣ ಪತ್ತೆಯಾಗಿದೆ.
ನೇತ್ರಾವತಿ ಎಕ್ಸ್ಪ್ರೆಸ್ನಲ್ಲಿ ಪದೇಪದೇ ನಡೆಯುವ ಕಳ್ಳತನದ ಪತ್ತೆಗಾಗಿ ರೈಲ್ವೆ ರಕ್ಷಣಾ ವಿಭಾಗ ಹೆಚ್ಚುವರಿಯಾಗಿ ಪೊಲೀಸರನ್ನು ನೇಮಿಸಿದ್ದು ಈ ಹಿನ್ನಲೆಯಲ್ಲಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ರೈಲಿನ ಎ.ಸಿ. ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ಟಿಕೆಟ್ ಕೇಳಿದ್ದಾರೆ. ಆದ್ರೆ ಟಿಕೆಟ್ನಲ್ಲಿದ್ದ ಹೆಸರಿಗೂ ಆರೋಪಿಗಳ ಹೆಸರಿಗೂ ವ್ಯತ್ಯಾಸವಿದ್ದ ಹಿನ್ನೆಲೆಯಲ್ಲಿ ತಪಾಸಣೆ ತೀವ್ರಗೊಳಿಸಿದ್ದಾರೆ. ಆಗ ಒಂದೂವರೆ ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದೆ.
ತನಿಖೆ ವೇಳೆ ರಾಜಸ್ಥಾನ ಮೂಲದವರು ಹಣ ಸಾಗಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದ್ದು, ಹಣ ಸಾಗಾಟ ನಡೆಸುತ್ತಿದ್ದ ಆರೋಪಿಗಳು ಜಾಗ ಖರೀದಿಗಾಗಿ ದುಡ್ಡು ತಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಆದರೆ ಹವಾಲಾ ಹಣ ಅಕ್ರಮ ಸಾಗಾಟದ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಲೋಕಸಭೆಯ ಉಪ ಚುನಾವಣೆಗೂ ಹಾಗೂ ಈ ಹಣಕ್ಕೂ ಏನಾದರೂ ಸಂಬಂಧ ಇದೆಯಾ ಎಂಬ ಬಗ್ಗೆ ಮಣಿಪಾಲ ಹಾಗೂ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಐಟಿ ಅಧಿಕಾರಿಗಳು , ಉಡುಪಿ ತಹಶೀಲ್ದಾರ್, ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಹಣದ ಮೂಲದ ಬಗ್ಗೆ ತೀವ್ರ ಸ್ವರೂಪದ ವಿಚಾರಣೆ ಮುಂದುವರಿದಿದೆ