ಹೆಬ್ರಿ, ನ 02 (MSP): ಎಸ್ಸೆಸ್ಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಇಬ್ಬರು ಶಿಕ್ಷಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಮುನಿಯಾಲು ಸರಕಾರಿ ಕಾಲೇಜಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಸೆಪ್ಟೆಂಬರ್ 14 ರಂದು ನಡೆದಿದ್ದು ತಕ್ಷಣ ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಶಾಲಾ ಪ್ರಾಂಶುಪಾಲರಿಗೆ ಮತ್ತು ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಸಂಬಂಧಪಟ್ಟವರು, ಲೈಂಗಿಕ ಕಿರುಕುಳ ನೀಡಿದ ಶಿಕ್ಷಕರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನ.1ರಂದು ಪೋಷಕರು ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿಕ್ಷಕರಾದ ಮಂಜುನಾಥ್ ,ಸುಧೀಂದ್ರ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇವರಿಬ್ಬರ ವಿರುದ್ದ ಹಾಗೂ ಯಾವುದೇ ಕ್ರಮ ಕೈಗೊಳದ ಪ್ರಾಂಶುಪಾಲ ರಾಮಕ್ರಷ್ಣ ಹೆಗ್ಡೆ ಮತ್ತು ಡಿಡಿಪಿಐ ಶೇಷಶಯನ ವಿರುದ್ಧ ಪೋಷಕರು ಹೆಬ್ರಿ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿನಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಕಾರಣ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.